ADVERTISEMENT

ನೀತಿ ಆಯೋಗದ ಸಭೆ: NDA ಮಿತ್ರಪಕ್ಷದ ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಗೈರು

ಪಿಟಿಐ
Published 27 ಜುಲೈ 2024, 9:11 IST
Last Updated 27 ಜುಲೈ 2024, 9:11 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ </p></div>

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್

   

ಪಟ್ನಾ: ನವದೆಹಲಿಯಲ್ಲಿ ಇಂದು (ಶನಿವಾರ) ನಡೆಯುತ್ತಿರುವ ನೀತಿ ಆಯೋಗದ ಸಭೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ಗೈರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಸಮ್ರಾಟ್‌ ಚೌಧರಿ ಹಾಗೂ ವಿಜಯ್‌ ಕುಮಾರ್‌ ಸಿನ್ಹಾ ಅವರು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದೂ ಹೇಳಿದ್ದಾರೆ.

ADVERTISEMENT

ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷ ಜೆಡಿ(ಯು) ಮುಖ್ಯಸ್ಥರೂ ಆಗಿರುವ ನೀತೀಶ್‌ ಅವರು ಸಭೆಗೆ ಗೈರಾಗಲು ಕಾರಣವೇನು ಎಂಬುದು ಸದ್ಯ ಬಹಿರಂಗವಾಗಿಲ್ಲ.

'ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿಯವರು ಗೈರಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಹಾಜರಾಗಿರಲಿಲ್ಲ. ಆಗಲೂ ಉಪಮುಖ್ಯಮಂತ್ರಿಯವರು ಬಿಹಾರವನ್ನು ಪ್ರತಿನಿಧಿಸಿದ್ದರು. ಈ ಬಾರಿಯೂ ಉಪಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ' ಎಂದು ಜೆಡಿ(ಯು) ವಕ್ತಾರ ನೀರಜ್‌ ಕುಮಾರ್‌ ಸುದ್ದಿಸಂಸ್ಥೆ 'ಪಿಟಿಐ'ಗೆ ತಿಳಿಸಿದ್ದಾರೆ.

'ಬಿಹಾರದ ನಾಲ್ಕು ಮಂದಿ ಕೇಂದ್ರ ಸಚಿವರು ಆಯೋಗದ ಮಂಡಳಿಯಲ್ಲಿದ್ದು, ಅವರೆಲ್ಲ ಸಭೆಗೆ ಹೋಗಿದ್ದಾರೆ. ಈ ಬಗ್ಗೆ ಹೇಳಲು ಇನ್ನೇನೂ ಇಲ್ಲ' ಎಂದಿದ್ದಾರೆ.

ಆಯೋಗದ 9ನೇ ಆಡಳಿತ ಮಂಡಳಿ ಸಭೆಯು 2047ರ ಹೊತ್ತಿಗೆ ವಿಕಸಿತ ಭಾರತ ನಿರ್ಮಾಣದ ಗುರಿಯೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿದೆ. ಪ್ರಧಾನಿ ಮುಖ್ಯಸ್ಥರಾಗಿರುವ ನೀತಿ ಆಯೋಗದ ಆಡಳಿತ ಮಂಡಳಿಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್ನರ್‌ಗಳು, ಕೇಂದ್ರ ಸಚಿವರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.