ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ಆನಕಲ್ ಪ್ರದೇಶದಲ್ಲಿ ಕಂಪನದ ಸಹಿತ ಸ್ಫೋಟದಂತಹ ಶಬ್ದ ಕೇಳಿಸಿ ಜನರು ಭಯಭೀತಿಗೊಂಡಿರುವ ಘಟನೆ ನಡೆದಿದೆ.
ಮುಂಜಾಗ್ರತಾ ಕ್ರಮವಾಗಿ ಸುಮಾರು 300 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 9.15ಕ್ಕೆ ಮೊದಲ ಬಾರಿ ಸದ್ದು ಕೇಳಿಸಿತು. ನಂತರ ರಾತ್ರಿ 10.15 ಹಾಗೂ 10.45ಕ್ಕೆ ಮತ್ತೆರಡು ಸಲ ಲಘು ಕಂಪನದ ಅನುಭವ ಉಂಟಾಯಿತು. ಈ ಶಬ್ದಗಳು ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಉಂಟಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭೀತಿಯನ್ನುಂಟು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ 85 ಕುಟುಂಬಗಳಿಗೆ ಸೇರಿದ 287 ಜನರನ್ನು ಶಾಲೆಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾನೈಟ್ ಕ್ವಾರಿಗಳಿಂದ ಕೇಳಿಬರುವುದಕ್ಕೆ ಸಮಾನವಾದ ಶಬ್ದ ಕೇಳಿಸಿತು. ನಿರಂತರವಾಗಿ ಕಂಪನ ಉಂಟಾಯಿತು. ಕೆಲವು ಮನೆಗಳಲ್ಲಿ ಬಿರುಕು ಕಂಡುಬಂದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭಯಭೀತರಾಗಿ ನಾವು ಮನೆಯಿಂದ ಹೊರಗಡೆ ಓಡಿ ಹೋದೆವು ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.
10 ದಿನಗಳ ಹಿಂದೆಯೂ ಇದಕ್ಕೆ ಸಮಾನವಾದ ಶಬ್ದ ಕೇಳಿಸಿತು ಎಂದು ಹಿರಿಯ ನಾಗರಿಕರೊಬ್ಬರು ತಿಳಿಸಿದ್ದಾರೆ.
ಗ್ರಾಮ, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜನರು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಲು ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.