ಪುಣೆ | ಭಾರಿ ಮಳೆಯಿಂದ ಹಲವು ಪ್ರದೇಶಗಳು ಜಲಾವೃತ: 400 ಮಂದಿ ಸ್ಥಳಾಂತರ
ಪಿಟಿಐ Published 25 ಜುಲೈ 2024, 9:58 IST Last Updated 25 ಜುಲೈ 2024, 9:58 IST ಸಂತ್ರಸ್ತರನ್ನು ಜಲಾವೃತ ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿರುವ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ
ಪುಣೆ: ನಗರದ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಸುಮಾರು 400 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದ ತೀವ್ರ ಹಾನಿಗೊಳಗಾಗಿರುವ ಸಿಂಹಗಢ ರಸ್ತೆ ಪ್ರದೇಶದಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ, ಜಿಲ್ಲಾ ಮತ್ತು ನಗರ ವಿಪತ್ತು ನಿರ್ವಹಣಾ ತಂಡಗಳಿಗೆ ಪರಿಹಾರ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅನೇಕ ಮನೆಗಳಿಗೆ ನೀರು ನುಗ್ಗಿದೆ. ಸಿಂಹಗಢ ಪ್ರದೇಶದಿಂದ ಸುಮಾರು 400 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಹಾಸ್ ದಿವ್ಸೆ ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ಪುಣೆಯಾದ್ಯಂತ 48 ಗಂಟೆಗಳ ‘ರೆಡ್ ಅಲರ್ಟ್’ ಘೋಷಿಸಿದೆ. ಖಡಕ್‌ವಾಸ್ಲಾ ಮತ್ತು ಇತರ ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಪುಣೆ ಜಿಲ್ಲೆಯ ಜಲಪಾತಗಳು ಮತ್ತು ಸರೋವರಗಳಂತಹ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಖಾಸಗಿ ಸಂಸ್ಥೆಗಳು ಹಾಗೂ ಕಚೇರಿಗಳ ಉದ್ಯೋಗಿಗಳಿಗೆ ರಜೆ ನೀಡುವಂತೆ ಸೂಚಿಸಲಾಗಿದೆ. ಶಾಲಾ–ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
‘ಆಲಮಟ್ಟಿಯಿಂದ 3 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿ’
‘ಆಲಮಟ್ಟಿ ಅಣೆಕಟ್ಟೆಯಿಂದ 2.5 ಲಕ್ಷ ಕ್ಯುಸೆಕ್ ನೀರನ್ನು ಈಗ ಬಿಡುಗಡೆ ಮಾಡಲಾಗುತ್ತಿದೆ. ಈ ಪ್ರಮಾಣವನ್ನು 3 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಕೇಳಿಕೊಂಡ್ಡೇವೆ’ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ಹೇಳಿದರು. ‘ಒಂದು ವೇಳೆ ಆಲಮಟ್ಟಿ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಲಿಲ್ಲವಾದರೆ ಸಾಂಗ್ಲಿ ಹಾಗೂ ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಬಹುದು’ ಎಂದರು. ಸತಾರ ಜಿಲ್ಲೆಯ ಮಹಾಬಲೇಶ್ವರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಗಳಲ್ಲಿ 40 ಸೆಂ.ಮೀ.ಗೂ ಅಧಿಕ ಪ್ರಮಾಣದ ಮಳೆಯಾಗಿದೆ. ಮಹಾಬಲೇಶ್ವರದಲ್ಲಿ ಮಳೆಯಾದರೆ ಕೊಯ್ನಾ ಅಣೆಕಟ್ಟೆಗೆ ನೀರು ಬರಲಿದೆ. ಈಗ ಈ ಅಣೆಕಟ್ಟೆ ಶೇ 75ರಷ್ಟು ತುಂಬಿದೆ. ಮಳೆಯು ಇದೇ ರೀತಿ ಮುಂದುವರಿದರೆ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಬೇಕಾಗಬಹುದು. ಇದು ಕೃಷ್ಣಾ ನದಿಯ ನೀರಿನ ಮಟ್ಟವನ್ನು ಹೆಚ್ಚಲಿದೆ. ಕೊಯ್ನಾ ನದಿಯು ಕೃಷ್ಣಾ ನದಿಯ ಅತಿ ದೊಡ್ಡ ಉಪನದಿಯಾಗಿದೆ.
ಬತ್ತಿದ್ದ ಜಲಾಶಯದಲ್ಲೀಗ ನೀರು
ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಮೂರು ಜಲಾಶಯಗಳಿವೆ. ಇದರಲ್ಲಿ ಒಂದು ಮಂಜರಾ ಅಣೆಕಟ್ಟು. ಈ ಜಲಾಶಯದಲ್ಲಿ ನೀರು ಇಲ್ಲವೇ ಇಲ್ಲ ಎನ್ನುವಂತಾಗಿತ್ತು. ಆದರೆ ಈಗ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಲಾಶಯವು ತುಂಬಿದೆ. ಈ ಜಲಾಶಯವು ಧಾರಾಶಿವ್ ಹಾಗೂ ಬೀಢ್ ಜಿಲ್ಲೆಯ ಹಲವು ಪ್ರದೇಶಗಳಿಗೆ ನೀರಿನ ಮೂಲವಾಗಿದೆ.