ADVERTISEMENT

ವಿಮಾನಗಳಿಗೆ ಮುಂದುವರಿದ ಬಾಂಬ್‌ ಬೆದರಿಕೆ: ಹಲವು ವಿಮಾನಗಳ ಮಾರ್ಗ ಬದಲಾವಣೆ

ಪಿಟಿಐ
Published 22 ಅಕ್ಟೋಬರ್ 2024, 14:28 IST
Last Updated 22 ಅಕ್ಟೋಬರ್ 2024, 14:28 IST
...
...   

ನವದೆಹಲಿ: ವಿಮಾನಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಬರುತ್ತಿರುವುದು ಮುಂದುವರಿದಿದ್ದು, ಮಂಗಳವಾರ ಒಂದೇ ದಿನ ಮತ್ತೆ 50 ವಿಮಾನಗಳಿಗೆ ಬೆದರಿಕೆ ಸಂದೇಶಗಳು ಬಂದಿವೆ. ‌ಸೋಮವಾರ ರಾತ್ರಿಯಿಂದ ಬಂದಿರುವ ಬೆದರಿಕೆ ಸಂದೇಶಗಳ ಸಂಖ್ಯೆ 80ಕ್ಕೆ ತಲುಪಿದೆ.

ಅ.14ರಿಂದ ಈವರೆಗೆ ಭಾರತದ ಸುಮಾರು 170ರಿಂದ 180 ವಿಮಾನಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಬಂದಿವೆ.

ಏರ್ ಇಂಡಿಯಾ ಮತ್ತು ಇಂಡಿಗೊದ ತಲಾ 13 ವಿಮಾನಗಳು, ಆಕಾಸಾ ಏರ್‌ನ 12ಕ್ಕೂ ಹೆಚ್ಚು ವಿಮಾನಗಳು ಹಾಗೂ ವಿಸ್ತಾರಾದ 11 ವಿಮಾನಗಳಿಗೆ ಮಂಗಳವಾರ ಬಾಂಬ್ ಬೆದರಿಕೆಯ ಸಂದೇಶಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸೋಮವಾರ ರಾತ್ರಿ ಏರ್ ಇಂಡಿಯಾ, ಇಂಡಿಗೊ ಮತ್ತು ವಿಸ್ತಾರಾದ ತಲಾ 10 ವಿಮಾನಗಳಿಗೆ ಬೆದರಿಕೆ ಸಂದೇಶಗಳು ಬಂದಿದ್ದವು. ಜಿದ್ದಾಕ್ಕೆ ಹೋಗುವ ಇಂಡಿಗೊದ ಮೂರು ವಿಮಾನಗಳನ್ನು ಸೌದಿ ಅರೇಬಿಯಾದ ರಿಯಾದ್‌ ಮತ್ತು ಕತಾರ್‌ನ ದೋಹಾ ವಿಮಾನ ನಿಲ್ದಾಣಗಳತ್ತ ತಿರುಗಿಸಲಾಯಿತು.

‘ಮಂಗಳವಾರ ಕೆಲವು ವಿಮಾನಗಳಿಗೆ ಭದ್ರತಾ ಎಚ್ಚರಿಕೆಗಳು ಬಂದಿವೆ. ಸ್ಥಳೀಯ ಅಧಿಕಾರಿಗಳ ಸಮನ್ವಯದಲ್ಲಿ ಎಲ್ಲಾ ಸುರಕ್ಷತಾ ಮತ್ತು ಭದ್ರತಾ ಕ್ರಮಗಳನ್ನು ಸಂಸ್ಥೆಯು ತೆಗೆದುಕೊಂಡಿದೆ’ ಎಂದು ಆಕಾಸಾ ಏರ್ ವಕ್ತಾರರು ತಿಳಿಸಿದ್ದಾರೆ.

ಮಂಗಳವಾರ ತಮ್ಮ ವಿಮಾನಗಳಿಗೆ ಬಂದಿರುವ ಬೆದರಿಕೆ ಸಂದೇಶಗಳ ಕುರಿತು ಇಂಡಿಗೊ, ಏರ್ ಇಂಡಿಯಾ ಮತ್ತು ವಿಸ್ತಾರಾ ತಕ್ಷಣಕ್ಕೆ ಯಾವುದೇ ಹೇಳಿಕೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.