ADVERTISEMENT

ಕಾನೂನು ಹೋರಾಟದ ಜತೆಗೆ ಸತ್ಯಾಗ್ರಹ ಏಕೆ?: ರೈತರಿಗೆ ಸುಪ್ರೀಂ ಕೋರ್ಟ್‌

ರೈತರಿಗೆ ಪ್ರತಿಭಟನೆ ಹಕ್ಕು ಇರುವಂತೆ, ನಾಗರಿಕರಿಗೆ ತಮ್ಮ ಆಸ್ತಿ ರಕ್ಷಣೆಯ ಹಕ್ಕೂ ಇದೆ

ಪಿಟಿಐ
Published 1 ಅಕ್ಟೋಬರ್ 2021, 16:46 IST
Last Updated 1 ಅಕ್ಟೋಬರ್ 2021, 16:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ನೀವು (ರೈತರು) ಈಗಾಗಲೇ ದೆಹಲಿಯನ್ನು ಉಸಿರುಗಟ್ಟಿಸಿದ್ದೀರಿ. ಈಗ ನಗರದೊಳಗೂ ಬಂದು ಪ್ರತಿಭಟನೆ ನಡೆಸಬೇಕೆ’ ಎಂದು ರೈತ ಸಂಘಟನೆಗಳನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕನಿಷ್ಠ 200 ರೈತರಿಗೆ ಅನುಮತಿ ನೀಡಲು ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿ ಎಂದು ಸುಪ್ರೀಂ ಕೋರ್ಟ್‌ಗೆ ರೈತ ಮಹಾಪಂಚಾಯತ್ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್‌ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು.

‘ನೀವು ಪ್ರತಿಭಟನೆ ನಡೆಸುವ ಮೂಲಕ ದೆಹಲಿಯ ಉಸಿರುಗಟ್ಟಿಸಿದ್ದೀರಿ. ದೆಹಲಿಯ ಜನತೆಗೂ ಮುಕ್ತವಾಗಿ ಸಂಚರಿಸುವ ಹಕ್ಕಿದೆ. ಈಗ ನಗರದೊಳಗೂ ಪ್ರತಿಭಟನೆ ನಡೆಸಲು ಅನುಮತಿ ನೀಡಿ ಎಂದು ಕೋರುತ್ತಿದ್ದೀರಿ. ನಿಮ್ಮ ಬೇಡಿಕೆಯಲ್ಲಿ ಸಮತೋಲನ ಇರಬೇಕು’ ಎಂದು ಪೀಠವು ಅರ್ಜಿದಾರರಿಗೆ ಸೂಚಿಸಿತು.

ADVERTISEMENT

ಅದಕ್ಕೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರು ಜಂತರ್‌ ಮಂತರ್‌ನಲ್ಲಿ ಅಹಿಂಸಾತ್ಮಕ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಹೇಳಿದರು.

ಆಗ ಪೀಠವು, ‘ಸತ್ಯಾಗ್ರಹ ನಡೆಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ನೀವು ಈಗಾಗಲೇ ಈ ಕಾಯ್ದೆಗಳ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದೀರಿ. ಒಮ್ಮೆ ನೀವು ನ್ಯಾಯಾಲಯದ ಮೆಟ್ಟಿಲೇರಿದ ಮೇಲೆ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಡಬೇಕು. ನ್ಯಾಯಾಲಯವು ನಿಮ್ಮ ಅರ್ಜಿಯನ್ನು ಇತ್ಯರ್ಥಪಡಿಸಲಿದೆ’ ಎಂದು ಪೀಠವು ಹೇಳಿದೆ.

‘ನೀವು ನ್ಯಾಯಾಲಯದ ಮೆಟ್ಟಿಲೇರಿದ ಮೇಲೆ ಮತ್ತೆ ಸತ್ಯಾಗ್ರಹ ನಡೆಸುವ ಅವಶ್ಯಕತೆ ಏನಿದೆ’ ಎಂದು ಪೀಠವು ಪ್ರಶ್ನಿಸಿತು. ‘ಆ ಕಾಯ್ದೆಗಳನ್ನು ರದ್ದುಪಡಿಸಿ ಎಂದು ಅರ್ಜಿ ಸಲ್ಲಿಸಿದ್ದೀರಿ. ಹೀಗಿದ್ದಾಗ ನೀವು ಅದೇ ಬೇಡಿಕೆ ಇರಿಸಿಕೊಂಡು ಸತ್ಯಾಗ್ರಹ ಅಥವಾ ಪ್ರತಿಭಟನೆ ನಡೆಸುವುದರಲ್ಲಿ ಅರ್ಥವಿಲ್ಲ’ ಎಂದು ಪೀಠವು ಹೇಳಿತು.

‘ನೀವು ಪ್ರತಿಭಟನೆ ನಡೆಸುವ ಮುನ್ನ ದೆಹಲಿ ನಿವಾಸಿಗಳ ಅನುಮತಿ ಪಡೆದಿದ್ದೀರಾ? ನಿಮ್ಮ ಪ್ರತಿಭಟನೆಯಿಂದ ಅವರಿಗೆ ಆನಂದವಾಗಿದೆಯೇ? ಅವರ ಸ್ವತ್ತುಗಳಿಗೆ ಹಾನಿಯಾಗಿಲ್ಲವೇ’ ಎಂದು ಪೀಠವು ಪ್ರಶ್ನಿಸಿತು.

ಅರ್ಜಿಯ ಮುಂದಿನ ವಿಚಾರಣೆ ಅಕ್ಟೋಬರ್ 4ರಂದು ನಡೆಯಲಿದೆ.

ಪ್ರಮಾಣಪತ್ರ ಸಲ್ಲಿಸಲು ಸೂಚನೆ

ಹೆದ್ದಾರಿಗಳಲ್ಲಿ ಸಂಚರಿಸುವ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಪ್ರತಿಭಟನೆನಿರತ ರೈತರು ತಡೆದು, ತೊಂದರೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿರುವುದನ್ನು ನಾವು ನೋಡಿದ್ದೇವೆ ಎಂದು ಪೀಠವು ಹೇಳಿತು.

ಅರ್ಜಿದಾರರ ಪರ ವಕೀಲರು ಇದನ್ನು ನಿರಾಕರಿಸಿದರು. ರೈತರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಪೀಠವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.

‘ಯಾವುದು ಶಾಂತಿಯುತ ಪ್ರತಿಭಟನೆ? ಹೆದ್ದಾರಿ ತಡೆ ನಡೆಸುವುದು, ರೈಲು ತಡೆ ನಡೆಸುವುದು ಆ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅಡಚಣೆ ಉಂಟು ಮಾಡುವುದು ಶಾಂತಿಯುತ ಪ್ರತಿಭಟನೆಯೇ’ ಎಂದು ಪೀಠವು ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲರು, ‘ರೈತರು ಹೆದ್ದಾರಿ ತಡೆ ನಡೆಸಿಲ್ಲ. ಹೆದ್ದಾರಿಯನ್ನು ಮುಚ್ಚಿದ್ದು ಪೊಲೀಸರು’ ಎಂದು ಹೇಳಿದರು. ಆಗ ಪೀಠವು, ‘ಹಾಗಿದ್ದರೆ, ಅರ್ಜಿದಾರರು ಹೆದ್ದಾರಿ ತಡೆಯಲ್ಲಿ ಭಾಗಿಯಾಗಿಲ್ಲ ಎಂದು ಪ್ರಮಾಣ ಪತ್ರ ನೀಡಲಿ. ನಂತರ ವಿಚಾರಣೆ ಮುಂದುವರಿಸೋಣ’ ಎಂದು ಪೀಠವು ಹೇಳಿತು. ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿತು.

ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವುದಕ್ಕೂ ಮುನ್ನ ಅದನ್ನು ಕೇಂದ್ರೀಯ ಪ್ರಾಧಿಕಾರಗಳಿಗೆ ಮತ್ತು ಅಟಾರ್ನಿ ಜನರಲ್ ಅವರಿಗೂ ಸಲ್ಲಿಸಿ ಎಂದು ಸೂಚಿಸಿತು.

ಹರಿಯಾಣ: ರೈತರ ಮೇಲೆ ಜಲಫಿರಂಗಿ

ಚಂಡೀಗಡ (ಪಿಟಿಐ): ಝಾಜ್ಜರ್‌ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರ ಮೇಲೆ, ಶುಕ್ರವಾರ ಜಲಫಿರಂಗಿ ಪ್ರಯೋಗಿಸಲಾಗಿದೆ.

ಕೇಂದ್ರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು, ಬಿಜೆಪಿ ಹಾಗೂ ಜೆಜೆಪಿ ಮೈತ್ರಿ ಸರ್ಕಾರದ ಸಾರ್ವಜನಿಕ ಕಾರ್ಯಕ್ರಮಗಳನ್ನೂ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆನಿರತ ಕೆಲವು ರೈತರು ಕಾರ್ಯಕ್ರಮ ನಿಗದಿಯಾದ ಸ್ಥಳದ ಸುತ್ತಲು ಹಾಕಿದ್ದ ಬ್ಯಾರಿಕೇಡ್‌ ಜಿಗಿದು, ಕಾರ್ಯಕ್ರಮದ ವೇದಿಕೆಯತ್ತ ನುಗ್ಗಲು ಯತ್ನಿಸಿದರು. ಈ ವೇಳೆ ಪ್ರತಿಭಟನಕಾರರನ್ನು ಚದುರಿಸಲು, ಜಲಫಿರಂಗಿ ಪ್ರಯೋಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಇಂದ್ರಿಯಲ್ಲಿ ನಡೆದಿದ್ದ ಬಿಜೆಪಿ ಸಭೆಗೂ ರೈತರು ಮುತ್ತಿಗೆ ಹಾಕಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.