ನವದೆಹಲಿ: ‘ದೇಶದ ಶೇ 6.8ರಷ್ಟು ಮಧ್ಯಮ ವರ್ಗದ ಮಂದಿ ಮಾತ್ರವೇ ಖಾಸಗಿ ವೈದ್ಯಕೀಯ ವಿಮೆ ಹೊಂದಿದ್ದಾರೆ. ಆದ್ದರಿಂದ ಮಧ್ಯಮ ವರ್ಗದ ಜನರಿಗಾಗಿ ಉತ್ತಮ ಮಾದರಿಯ ವೈದ್ಯಕೀಯ ವಿಮೆಯನ್ನು ಕೊಡುವ ಅಗತ್ಯ ಇದೆ’ ಎಂದು ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ. ವಿ.ಕೆ. ಪಾಲ್ ಹೇಳಿದರು.
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮಂಗಳವಾರ ಆಯೋಜಿಸಿದ್ದ ‘ಎಫ್‌ಐಸಿಸಿಐ ಹೀಲ್ 2022’ ಕಾರ್ಯಕ್ರಮದಲ್ಲಿ ‘ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಆರೋಗ್ಯಸೇವೆಗಳ ಪಾತ್ರ’ ವಿಷಯದ ಕುರಿತು ಅವರು ಮಾತನಾಡಿದರು. ‘ಕಳೆದುಹೋಗಿರುವ ಮಧ್ಯಮ ವರ್ಗ’ದ 30ರಿಂದ 40 ಕೋಟಿ ಜನರಿಗೆ ವೈದ್ಯಕೀಯ ವಿಮೆ ಬೇಕು ಎನ್ನುವುದನ್ನು ನೀತಿ ಆಯೋಗವು ಹಿಂದಿನಿಂದ ಹೇಳಿಕೊಂಡು ಬಂದಿದೆ’ ಎಂದರು.
‘ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿ ದೇಶದಲ್ಲಿ ಎರಡು ಮಧ್ಯಮ ಅವಧಿಯ ಬಂಡವಾಳ ಯೋಜನೆಗಳಿವೆ. ಒಂದು, 15ನೇ ಹಣಕಾಸು ಆಯೋಗದ ಅಡಿಯಲ್ಲಿ ₹77 ಸಾವಿರ ಕೋಟಿ ಹೂಡಿಕೆ ಆಗುತ್ತಿದೆ. ಇನ್ನೊಂದು ಆಯುಷ್ಮಾನ್ ಭಾರತ ವಿಮೆ ಮಿಷನ್ ಅಡಿಯಲ್ಲಿ ₹64 ಸಾವಿರ ಕೋಟಿ ಬಳಕೆಯಾಗುತ್ತಿದೆ. ಈ ಎರಡೂ ಐದು ವರ್ಷದ ಅವಧಿಗೆ ಹೂಡಿಕೆ ಆಗುವಂಥವು’ ಎಂದು ವಿವರಿಸಿದರು.
‘ಈ ಎರಡೂ ಯೋಜನೆಗಳ ಮೊತ್ತವನ್ನು ಕೂಡಿಸಿ, ದೇಶದಲ್ಲಿರುವ ರಾಜ್ಯಗಳಿಂದ ಬಾಗಿಸಿದರೆ, ಪ್ರತಿ ಜಿಲ್ಲೆಗೆ ₹200 ಕೋಟಿ ಹಣ ಸಿಗಲಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಐದು ವರ್ಷದಲ್ಲಿ ಪ್ರತಿ ಜಿಲ್ಲೆಗೂ ಇಷ್ಟೊಂದು ಹಣ ಸಿಗಲಿದೆ. ಇದು ಅಭಿವೃದ್ಧಿಗೆ ಪೂರಕವಾಗಿದೆ’ ಎಂದರು.
ವೈದ್ಯಕೀಯ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ಕೆಲವು ದಿನಗಳಲ್ಲಿಯೇ ಈ ಸಂಬಂಧ ಪ್ರಮುಖ ಯೋಜನೆಗಳನ್ನು, ಉತ್ತೇಜಕಗಳನ್ನು ಘೋಷಿಸಲಾಗುವುದು
- ಡಾ. ವಿ.ಕೆ. ಪಾಲ್, ನೀತಿ ಆಯೋಗದ (ಆರೋಗ್ಯ) ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.