ADVERTISEMENT

ಪರಿಸ್ಥಿತಿ ಸಂಕೀರ್ಣಗೊಳಿಸುವ ಚಟುವಟಿಕೆ ಬೇಡ: ರಾಜನಾಥ್‌ ಸಿಂಗ್‌

ಪಿಟಿಐ
Published 10 ಡಿಸೆಂಬರ್ 2020, 7:17 IST
Last Updated 10 ಡಿಸೆಂಬರ್ 2020, 7:17 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ನವದೆಹಲಿ: ಗಡಿ ವಿಷಯವಾಗಿ ಪದೇ ಪದೇ ತಂಟೆ ತೆಗೆಯುವ ಚೀನಾಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಗುರುವಾರ ಚಾಟಿ ಬೀಸಿದ್ದಾರೆ. ಪರಿಸ್ಥಿತಿಯನ್ನು ಮತ್ತಷ್ಟೂ ಸಂಕೀರ್ಣಗೊಳಿಸುವ ಚಟುವಟಿಕೆಗಳನ್ನು ಬಿಡಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

ಆಕ್ರಮಣಕಾರಿ ಚಟುವಟಿಕೆಗಳನ್ನು ಕೈಬಿಡುವ ನಿಟ್ಟಿನಲ್ಲಿ ಸ್ವಯಂ ನಿಯಂತ್ರಣ ಹಾಗೂ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುವ ಕ್ರಮಗಳಿಂದ ದೂರ ಇರುವುದರಿಂದ ಉಭಯ ದೇಶಗಳ ನಡುವೆ ಶಾಂತಿ ನೆಲೆಸಲು ಸಾಧ್ಯ ಎಂದು ಅವರು ಹೇಳಿದರು.

ಆಸಿಯಾನ್‌ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ರಕ್ಷಣಾ ಸಚಿವರ ಸಭೆಯಲ್ಲಿ (ಎಡಿಎಂಎಂ–ಪ್ಲಸ್‌) ಅವರು ಮಾತನಾಡಿದರು. ಆನ್‌ಲೈನ್‌ ಮೂಲಕ ನಡೆದ ಸಭೆಯಲ್ಲಿ ಚೀನಾ ರಕ್ಷಣಾ ಸಚಿವ ವೀ ಫೆಂಗ್‌ ಅವರೂ ಇದ್ದರು. ಈ ಒಕ್ಕೂಟದ ಸದಸ್ಯ ರಾಷ್ಟ್ರಗಳ ಸಂಖ್ಯೆ 10.

ADVERTISEMENT

ಲಡಾಖ್‌ನ ಪೂರ್ವ ಗಡಿಯಲ್ಲಿ ಚೀನಾ ಕ್ಯಾತೆ ತೆಗೆದ ಕಾರಣ ಕಳೆದ ಏಳು ತಿಂಗಳಿನಿಂದ ನಿರ್ಮಾಣವಾಗಿರುವ ಪ್ರಕ್ಷುಬ್ಧ ಸ್ಥಿತಿ ಹಿನ್ನೆಲೆಯಲ್ಲಿ ರಾಜನಾಥ್‌ ಸಿಂಗ್‌ ಹೇಳಿಕೆಗೆ ಮಹತ್ವ ಬಂದಿದೆ.

‘ಏಷ್ಯಾದ ಈ ಪ್ರದೇಶದಲ್ಲಿ ಸದ್ಯದ ಪರಿಸ್ಥಿತಿ ತೀವ್ರ ಒತ್ತಡದಲ್ಲಿದೆ. ಆದರೆ, ಪ್ರಾದೇಶಿಕ ಸಹಕಾರದ ಮೂಲಕ ಭದ್ರತೆ, ಬಹುತ್ವವನ್ನು ಕಾಪಾಡುವಲ್ಲಿ ಆಸಿಯಾನ್‌ ನೇತೃತ್ವದ ವಿವಿಧ ವೇದಿಕೆಗಳು ವಹಿಸುತ್ತಿರುವ ಪಾತ್ರ ಶ್ಲಾಘನೀಯ’ ಎಂದು ರಾಜನಾಥ್‌ ಸಿಂಗ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.