ಕಚ್: ದೇಶದ ಏಕತೆಗೆ ಯಾರೊಬ್ಬರಿಂದಲೂ ಹಾನಿಯಾಗದಂತೆ ನೋಡಿಕೊಳ್ಳುವ ಮತ್ತು ಅದು ಸುಭದ್ರವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದರು.
ಗುಜರಾತ್‌ನ ಕಚ್‌ನ ಗುರುದ್ವಾರ ಲಖ್‌ಪತ್ ಸಾಹಿಬ್‌ನಲ್ಲಿ ಗುರುನಾನಕ್ ದೇವ್ ಜಿ ಅವರ ಗುರುಪುರಬ್ ಆಚರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದರು. 'ಅಂದು ಗುರುಗಳು ಜನರನ್ನು ಎಚ್ಚರಿಸಿದ್ದ ಅಪಾಯಗಳು ಇಂದಿಗೂ ಅಸ್ತಿತ್ವದಲ್ಲಿವೆ. ಆದ್ದರಿಂದ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಮತ್ತು ದೇಶವು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ' ಎಂದು ಹೇಳಿದರು.
ಲುಧಿಯಾನದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ (ಡಿ.23) ಎರಡು ದಿನಗಳ ಬಳಿಕ ಮೋದಿ ಸಿಖ್ ಸಮುದಾಯದಲ್ಲಿ ಮನವಿ ಮಾಡಿದ್ದಾರೆ.
'ಇಂತಹ ಮುಖ್ಯವಾದ ಸಮಯದಲ್ಲಿ ನಮ್ಮ ಕನಸುಗಳಿಗೆ ಮತ್ತು ದೇಶದ ಏಕತೆಗೆ ಯಾರಿಂದಲೂ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ತಮ್ಮ ಜೀವನವನ್ನೇ ತ್ಯಾಗ ಮಾಡಿದಂತ ನಮ್ಮ ಗುರುಗಳ ಕನಸುಗಳನ್ನು ನನಸಾಗಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ನಮಗೆಲ್ಲರಿಗೂ ಒಗ್ಗಟ್ಟು ತುಂಬಾ ಮುಖ್ಯ' ಎಂದು ಹೇಳಿದರು.
'ಗುರುಗಳು ನಮ್ಮನ್ನೆಲ್ಲ ಎಚ್ಚರಿಸಿದ್ದ ಅಪಾಯವು ಇಂದಿಗೂ ಇದ್ದು, ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು ಮತ್ತು ನಮ್ಮ ದೇಶದ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಬೇಕು. ಗುರು ನಾನಕ್ ದೇವ್ ಜಿ ಅವರ ಆಶೀರ್ವಾದದಿಂದಾಗಿ, ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತೇವೆ ಮತ್ತು ದೇಶವು ಮತ್ತೊಂದು ಹಂತಕ್ಕೇರಲಿದೆ' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.