ನವದೆಹಲಿ‘ಏಡ್ಸ್ ರೋಗವನ್ನು 2030ರ ಹೊತ್ತಿಗೆ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ಈ ದಿಸೆಯಲ್ಲಿ ಎಚ್‌ಐವಿ ತಡೆ ಸೌಲಭ್ಯ, ಚಿಕಿತ್ಸೆ ಮತ್ತು ಆರೈಕೆಯು ಎಲ್ಲರಿಗೂ ಸಮಾನವಾಗಿ ಸಿಗುವಂತೆ ಮಾಡುವ ಜರೂರು ಇದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಅಭಿಪ್ರಾಯಪಟ್ಟಿದೆ.
ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಡಬ್ಲ್ಯುಎಚ್‌ಒದ ಆಗ್ನೇಯಏಷ್ಯಾ ವಿಭಾಗದ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಖರ್ತಪಾಲ್ ಅವರು ಮಾತನಾಡಿದರು. ‘ನಮ್ಮ ಭಾಗದಲ್ಲಿ ಸುಮಾರು 38 ಲಕ್ಷ ಜನರು ಎಚ್‌ಐವಿ ಸೋಂಕಿತರಾಗಿದ್ದಾರೆ. ಇದು ಜಾಗತಿಕ ಸಂಖ್ಯೆಯ ಶೇ 10ರಷ್ಟಾಗುತ್ತದೆ’ ಎಂದರು.
‘ಶೇ 95ರಷ್ಟು ಹೊಸ ಎಚ್‌ಐವಿ ಸೋಂಕಿನ ಪ್ರಕರಣಗಳು, ಲೈಂಗಿಕ ಕಾರ್ಯಕರ್ತರು, ಸಿರೆಂಜ್ ಮೂಲಕ ಮಾದಕವಸ್ತು ತೆಗೆದುಕೊಳ್ಳುವವರು, ಪುರುಷ–ಪುರುಷ ಹಾಗೂ ಪುರುಷ–ಲಿಂಗಪರಿವರ್ತಿತರ ಜೊತೆಗಿನ ಲೈಂಗಿಕ ಸಂಪರ್ಕದಿಂದಾಗಿ ಹರಡುತ್ತಿವೆ’ ಎಂದರು.
‘ಎಚ್ಐವಿ ತಡೆ ಸೌಲಭ್ಯಗಳ ಕುರಿತು ಶೇ 22ರಷ್ಟು ಯುವಕರಿಗೆ ಮಾತ್ರ ತಿಳಿದಿದೆ. ಎಚ್‌ಐವಿ ಸೋಂಕಿನ ಸ್ವ–ಪರೀಕ್ಷೆ ಹಾಗೂ ರೋಗ ನಿರೋಧಕ ಔಷಧಗಳ ಬಗ್ಗೆ ಇನ್ನೂ ವರೆಗೂ ಯುವಕರಿಗೆ ಮಾಹಿತಿ ಇಲ್ಲ. ಸಿರಿಂಜ್ ಮೂಲಕ ಮಾದಕ ವಸ್ತು ತೆಗೆದುಕೊಳ್ಳುತ್ತಿರುವವರ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿದರೆ ಸೋಂಕು ತಡೆಗಟ್ಟುವ ಕಾರ್ಯದಲ್ಲಿ ಸುಧಾರಣೆಯಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.