ADVERTISEMENT

ಪದಕ ಗೆದ್ದ ʼನೀರಜ್ʼ ಹೆಸರಿನವರಿಗೆಲ್ಲಾ ಉಚಿತ ಪೆಟ್ರೋಲ್‌ ಘೋಷಿಸಿದ ಬಂಕ್‌ ಮಾಲೀಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2021, 4:06 IST
Last Updated 10 ಆಗಸ್ಟ್ 2021, 4:06 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ಭರೂಚ್: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ದೇಶದಾದ್ಯಂತ ಪ್ರಶಂಸೆ, ಅಭಿನಂದನೆ ಮತ್ತು ಬಹುಮಾನಗಳ ಮಹಾಪೂರವೇ ಹರಿದುಬರುತ್ತಿದ್ದು, ಗುಜರಾತಿನ ಭರೂಚ್‌ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ಈ ಐತಿಹಾಸಿಕ ಗೆಲುವನ್ನು ಆಚರಿಸಲು ಗ್ರಾಹಕರಿಗೆ ವಿಶೇಷ ಆಫರ್ ನೀಡುವುದಾಗಿ ಘೋಷಿಸಿದ್ದಾರೆ.

ಪೆಟ್ರೋಲ್ ಬಂಕ್ ಮಾಲೀಕರಾದ ಆಯುಬ್ ಪಠಾಣ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದ ಜಾವೆಲಿನ್ ಥ್ರೋವರ್‌ ನೀರಜ್ ಚೋಪ್ರಾರ ಹೆಸರಿನವರಿಗೆ 500 ರೂ. ವರೆಗೆ ಉಚಿತ ಪೆಟ್ರೋಲ್ ನೀಡಲು ನಿರ್ಧರಿಸಿದ್ದಾರೆ.

ADVERTISEMENT

'ನೀರಜ್ ಚೋಪ್ರಾರನ್ನು ಗೌರವಿಸಲು ಇದು ನಮ್ಮ ಎರಡು ದಿನದ ಯೋಜನೆಯಾಗಿದೆ. ನೀರಜ್ ಚೋಪ್ರಾ ಅವರ ಹೆಸರನ್ನು ಹೊಂದಿರುವವರು ಯಾವುದೇ ಮಾನ್ಯ ಐಡಿ ಕಾರ್ಡ್ ತೋರಿಸಿದರೆ ಸಾಕು' ಎಂದು ಪಠಾಣ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಈಮಧ್ಯೆ, ನೀರಜ್ ಚೋಪ್ರಾರ ಸಾಧನೆಯನ್ನು ಸಂಭ್ರಮಿಸಲು ಸರ್ಕಾರ ದೆಹಲಿಯಲ್ಲಿ ಸಮಾರಂಭವೊಂದನ್ನು ಆಯೋಜಿಸಿತ್ತು. ಅವರ ಸಾಧನೆಯನ್ನ 'ಕ್ರೀಡಾ ಶ್ರೇಷ್ಠತೆಯ ಅದ್ಭುತ ಕಥೆ' ಎಂದು ಕರೆದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪದಕ ವಿಜೇತರಿಗೆ ಸ್ಮರಣಿಕೆ ಮತ್ತು ಶಾಲುಗಳನ್ನು ನೀಡಿ ಅಭಿನಂದಿಸಿದರು.

ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಕ್ಕೆ ಭಾರತೀಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಬಾಲಿವುಡ್ ನಟ-ನಟಿಯರು ಸೇರಿದಂತೆ ದೇಶದ ಬಹುತೇಕ ಜನರು ನಾನಾ ಬಗೆಯಲ್ಲಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಮೂಲತಃ ಹರಿಯಾಣದವರಾದ ನೀರಜ್ ಚೋಪ್ರಾಗೆ, ಹಲವಾರು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳಿಂದ ಬಹುಮಾನಗಳು ಮತ್ತು ಪ್ರಶಸ್ತಿಗಳು ಬಂದಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚೋಪ್ರಾಗೆ 1 ಕೋಟಿ ನಗದು ಬಹುಮಾನವನ್ನು ಘೋಷಿಸಿದೆ

ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೊ, ಚೋಪ್ರಾಗೆ ಒಂದು ವರ್ಷದ ಅನಿಯಮಿತ ಉಚಿತ ಪ್ರಯಾಣದ ಕೊಡುಗೆಯನ್ನು ಘೋಷಿಸಿದ್ದು, ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಹೊಸ XUV 700 ನೀಡುವುದಾಗಿ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.