ADVERTISEMENT

NEET 2024: ಸಿಬಿಐ ತನಿಖೆಗೆ ಕೇಂದ್ರದ ನಿರ್ಧಾರ

ಪಿಟಿಐ
Published 23 ಜೂನ್ 2024, 3:30 IST
Last Updated 23 ಜೂನ್ 2024, 3:30 IST
   

ನವದೆಹಲಿ/ಪಟ್ನಾ: ನೀಟ್ ಅಕ್ರಮಗಳ ಸಮಗ್ರ ತನಿಖೆಗಾಗಿ ಪ್ರಕರಣ ವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಲಾಗುವುದು ಎಂದು ಕೇಂದ್ರ ಸರ್ಕಾರವು ಶನಿವಾರ ರಾತ್ರಿ ಘೋಷಿಸಿದೆ.

‘ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಲು ನಿರ್ಧರಿಸಲಾಯಿತು’ ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ನೀಟ್‌–ಯುಜಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಸೂಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು.

ADVERTISEMENT

ಪರೀಕ್ಷೆಗೆ ಹಾಜರಾಗಿದ್ದ 10 ಮಂದಿ ವಿದ್ಯಾರ್ಥಿಗಳು ಈ ಅರ್ಜಿ ಸಲ್ಲಿಸಿದ್ದರು. ‍ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರಿಗೆ, ತನಿಖೆಯನ್ನು ಬೇಗನೆ ನಡೆಸಿ ವರದಿಯೊಂದನ್ನು ಸಲ್ಲಿಸಲು ಸೂಚಿಸಬೇಕು ಎಂದು ಕೂಡ ಅರ್ಜಿಯಲ್ಲಿ ಕೋರಲಾಗಿದೆ.

ನೀಟ್–ಯುಜಿ 2024 ಪರೀಕ್ಷೆಯನ್ನು ರದ್ದುಪಡಿಸಬೇಕು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆದೇಶಿಸಬೇಕು ಎಂಬ ಕೋರಿಕೆ ಇರುವ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಸಲ್ಲಿಕೆಯಾಗಿವೆ. ಅವುಗಳಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ಕೋರ್ಟ್‌ ನೋಟಿಸ್ ಜಾರಿಗೊಳಿಸಿದೆ.

ಎನ್‌ಟಿಎ ಪ್ರಶ್ನೆ ಪತ್ರಿಕೆ ಪರಿಶೀಲನೆ:

‘ನೀಟ್‌–ಯುಜಿ’ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸ್‌ ಆರ್ಥಿಕ ಅಪರಾಧಗಳ ಘಟಕವು (ಇಒಯು) ಪಟ್ನಾದ ಫ್ಲಾಟ್‌ನಿಂದ ವಶಪಡಿಸಿಕೊಂಡಿರುವ ಕೆಲ ದಾಖಲೆಗಳನ್ನು, ಎನ್‌ಟಿಎಯಿಂದ ಸ್ವೀಕರಿಸಿರುವ ಪ್ರಶ್ನೆ ಪತ್ರಿಕೆಯ ಜತೆಗೆ ತಾಳೆ ನೋಡಲು ಯೋಜಿಸಿದೆ.

ಕಳೆದ ತಿಂಗಳು ಕಾರ್ಯಾಚರಣೆ ನಡೆಸಿದ್ದ ಇಒಯು ಫ್ಲಾಟ್‌ವೊಂದರಿಂದ ಭಾಗಶಃ ಸುಟ್ಟಿದ್ದ ಪ್ರಶ್ನೆ ಪತ್ರಿಕೆಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೆ ಈ ಪ್ರಕರಣ ದಲ್ಲಿ ಇಲ್ಲಿಯವರೆಗೆ 13 ಜನರನ್ನೂ ಬಂಧಿಸಿದೆ.

‘ತನಿಖೆಯ ಭಾಗವಾಗಿ ನೀಟ್‌–ಯುಜಿ ಪರೀಕ್ಷೆಯ ಉಲ್ಲೇಖಿತ ಪ್ರಶ್ನೆ ಪತ್ರಿಕೆಗಳನ್ನು ಒದಗಿಸುವಂತೆ ಎನ್‌ಟಿಎ ಅನ್ನು ವಿನಂತಿಸಲಾಗಿತ್ತು. ಏಜೆನ್ಸಿಯು ಪ್ರಶ್ನೆ ಪತ್ರಿಕೆಗಳನ್ನು ಇದೀಗ ಒದಗಿಸಿದ್ದು, ಅದನ್ನು ನಾವು ವಶಪಡಿಸಿಕೊಂಡಿರುವ ಪತ್ರಿಕೆಗಳ ಜತೆ ತಾಳೆ ಮಾಡಿ ನೋಡುತ್ತೇವೆ’ ಎಂದು ಇಒಯು ಮೂಲಗಳು ತಿಳಿಸಿವೆ.

ಮಂಪರು ಪರೀಕ್ಷೆ ಸಾಧ್ಯತೆ:

ಈ ಪ್ರಕರಣದಲ್ಲಿ ಬಂಧಿತರಾಗಿರುವ ಕೆಲ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯ ಕುರಿತು ಇಒಯು ಪೊಲೀಸರು ಪರಿಶೀಲಿಸುತ್ತಿದ್ದಾರೆ.

‘ಕೆಲ ಆರೋಪಿಗಳು ಸ್ಪಂದಿಸುತ್ತಿಲ್ಲ. ಅವರ ಹೇಳಿಕೆಗಳಿಂದ ತನಿಖಾಧಿಕಾರಿ ತೃಪ್ತರಾಗಿಲ್ಲ. ಆದ್ದರಿಂದ ಆರೋಪಿಗಳ ಮಂಪರು ಪರೀಕ್ಷೆ ನಡೆಸುವ ಸಾಧ್ಯತೆಯೂ ಇದೆ. ಈ ವೇಳೆ ತನಿಖೆಗೆ ಹೊಸ ಮಾರ್ಗಗಳು ದೊರೆಯಬಹುದು ಎಂಬ ನಿರೀಕ್ಷೆಯನ್ನು ತನಿಖಾಧಿಕಾರಿಗಳು ಹೊಂದಿದ್ದಾರೆ’ ಎಂದು ಮೂಲಗಳು ಹೇಳಿವೆ.

6 ಜನರ ಬಂಧಿಸಿದ ಪೊಲೀಸರು

ದೇವಘರ್‌: ನೀಟ್‌ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರು ಜಾರ್ಖಂಡ್‌ನ ದೇವಘರ್‌ ಜಿಲ್ಲೆಯಲ್ಲಿ ಸ್ಥಳೀಯ ಪೊಲೀಸರ ನೆರವಿನಿಂದ ಆರು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಇಲ್ಲಿನ ದೇವಿಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಏಮ್ಸ್‌–ದೇವಘರ್‌ ಬಳಿಯ ಮನೆಯೊಂದರಿಂದ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಯಿತು. ಎಲ್ಲರನ್ನೂ ಬಿಹಾರಕ್ಕೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ.

ಬಂಧಿತರು ಬಿಹಾರದ ನಳಂದ ಜಿಲ್ಲೆಯ ನಿವಾಸಿಗಳಾಗಿದ್ದು, ಪರಮ್‌ಜಿತ್‌ ಸಿಂಗ್‌ ಅಲಿಯಾಸ್‌ ಬಿಟ್ಟು, ಚಿಂಟು ಅಲಿಯಾಸ್‌ ಬಲದೇವ್‌ ಕುಮಾರ್‌, ಕಾಜು ಅಲಿಯಾಸ್‌ ಪ್ರಶಾಂತ್‌ ಕುಮಾರ್‌, ಅಜಿತ್‌ ಕುಮಾರ್‌, ರಾಜೀವ್‌ ಕುಮಾರ್‌ ಮತ್ತು ಪಂಕು ಕುಮಾರ್‌ ಎಂದು ಗುರುತಿಸಲಾಗಿದೆ. ಅವರೆಲ್ಲರೂ ಇಲ್ಲಿನ ಜುನು ಸಿಂಗ್‌ ಎಂಬುವರ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ದೇವಘರ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಶನಿವಾರ ರಾಂಚಿಯಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಆರ್‌ಜೆಡಿಯ ಜಾರ್ಖಂಡ್‌ ಘಟಕ, ಪ್ರತಿಭಟನೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.