ADVERTISEMENT

NEET | ಸಂಸತ್‌ನತ್ತ ಜಾಥಾ; ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

ಪಿಟಿಐ
Published 24 ಜೂನ್ 2024, 11:27 IST
Last Updated 24 ಜೂನ್ 2024, 11:27 IST
<div class="paragraphs"><p>ಬ್ಯಾರಿಕೇಡ್‌ಗಳ ಮೇಲೇರಿ ಘೋಷಣೆಗಳನ್ನು ಕೂಗುತ್ತಿರುವ ಪ್ರತಿಭಟನಾನಿರತ ವಿದ್ಯಾರ್ಥಿಗಳು</p></div>

ಬ್ಯಾರಿಕೇಡ್‌ಗಳ ಮೇಲೇರಿ ಘೋಷಣೆಗಳನ್ನು ಕೂಗುತ್ತಿರುವ ಪ್ರತಿಭಟನಾನಿರತ ವಿದ್ಯಾರ್ಥಿಗಳು

   

ಪಿಟಿಐ ಚಿತ್ರ

ನವದೆಹಲಿ: ನೀಟ್‌–ಯುಜಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಯುಜಿಸಿ ನೀಟ್‌ ಪರೀಕ್ಷೆ ರದ್ದು ನಿರ್ಧಾರವನ್ನು ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಜಂತರ್‌ ಮಂತರ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ಕಾಂಗ್ರೆಸ್‌ ವಿದ್ಯಾರ್ಥಿ ಸಂಘಟನೆಯಾಗಿರುವ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ), 18ನೇ ಲೋಕಸಭೆ ಅಧಿವೇಶನದ ಮೊದಲ ದಿನವೇ (ಇಂದು) ಸಂಸತ್ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿತ್ತು.

ಎನ್‌ಎಸ್‌ಯುಐ ಧ್ವಜ ಹಾಗೂ ಅಕ್ರಮವನ್ನು ಖಂಡಿಸುವ ಬರಹಗಳನ್ನೊಳಗೊಂಡ ಫಲಕಗಳನ್ನು ಹಿಡಿದಿದ್ದ ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಜಂತರ್‌ ಮಂತರ್‌ನಲ್ಲಿ ಜಮಾಯಿಸಿದ್ದರು.

ವಿದ್ಯಾರ್ಥಿಗಳು ಮೆರವಣಿಗೆ ನಡೆಸದಂತೆ ತಡೆಯಲು ಪೊಲೀಸರು ಜಂತರ್‌ಮಂತರ್‌ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಸಶಸ್ತ್ರ ಪಡೆಗಳು ಹಾಗೂ ದೆಹಲಿ ಪೊಲೀಸರನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

ಕೆಲ ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ದಾಟಿ ಮುನ್ನುಗ್ಗಲು ಯತ್ನಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಮೆರವಣಿಗೆಗೆ ಅನುಮತಿ ಪಡೆಯದ ಆರೋಪದಲ್ಲಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ನಗರದ ವಿವಿಧ ಠಾಣೆಗಳಿಗೆ ಕರೆದೊಯ್ದಿದ್ದಾರೆ.

ಮೇ 5ರಂದು ನಡೆದಿರುವ ನೀಟ್‌–ಯುಜಿ ಪರೀಕ್ಷೆಯನ್ನು ರದ್ದು ಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆದರೆ, ಪರೀಕ್ಷೆ ಪಾಸಾಗಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕೆಲವರು ತಪ್ಪು ಮಾಡಿರುವ ಕಾರಣದಿಂದ ಅಪಾಯಕ್ಕೆ ನೂಕುವುದು ಸರಿಯಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ.

ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.