ಚಂಡೀಘಡ: ‘ವೈದ್ಯಕೀಯ ಕ್ಷೇತ್ರದ ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ ಅಗತ್ಯವಿರುವ ನೀಟ್–ಪಿಜಿ ಪರೀಕ್ಷೆಯ ದಿನಾಂಕವನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಾಗುವುದು’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಪರೀಕ್ಷೆಯ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಎ) ಶೀಘ್ರದಲ್ಲಿ ಘೋಷಿಸಲಿದೆ’ ಎಂದಿದ್ದಾರೆ. ಯುಜಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ನಂತರ ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.
ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಲೋಕಸಭೆಯಲ್ಲಿ ಗೌರವಯುತವಾದ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೋರಿರುವ ಕುರಿತು ಪ್ರತಿಕ್ರಿಯಿಸಿದ ಪ್ರಧಾನ್, ‘ನೀಟ್–ಯುಜಿ ವಿವಾದ ಕುರಿತು ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಿದ್ದರೂ, ಕಾಂಗ್ರೆಸ್ ಅದನ್ನು ವಿವಾದ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.
ನೀಟ್ ಪರೀಕ್ಷೆ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿರುವ ಪ್ರಧಾನ್, ‘ಕಾಂಗ್ರೆಸ್‌ಗೆ ಚರ್ಚೆಯೇ ಬೇಕಿಲ್ಲ. ವಿವಾದ ಸೃಷ್ಟಿಸುವುದಷ್ಟೇ ಅದರ ಕೆಲಸ. ಆ ಮೂಲಕ ಸರಿಯಾಗಿ ಸಾಗುತ್ತಿರುವ ಆಡಳಿತ ಯಂತ್ರಕ್ಕೆ ತೊಡರುಗಾಲಾಗುವುದು, ಗೊಂದಲ ಸೃಷ್ಟಿಸುವುದು ಅದರ ಉದ್ದೇಶ’ ಎಂದು ಆರೋಪಿಸಿದ್ದಾರೆ.
‘ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಅವರೂ ಕಾಂಗ್ರೆಸ್ ಎತ್ತಿದ ನೀಟ್ ಪರೀಕ್ಷೆಯ ವಿಷಯ ಕುರಿತು ಚರ್ಚೆಯ ಭರವಸೆ ನೀಡಿದ್ದಾರೆ. ಹೀಗಾಗಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಸಮಯದಲ್ಲಿ ನೀಟ್ ಪರೀಕ್ಷೆ ವಿವಾದ ಕುರಿತು ಚರ್ಚಿಸಲು ಕಾಂಗ್ರೆಸ್‌ಗೆ ಅವಕಾಶವಿದೆ. ಸರ್ಕಾರವೂ ಈ ವಿಷಯ ಕುರಿತು ಚರ್ಚೆಗೆ ಸಿದ್ಧವಿದೆ. ಆದರೆ ಈ ವಿಷಯವನ್ನು ಅನಗತ್ಯವಾಗಿ ರಾಜಕೀಯಗೊಳಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ’ ಎಂದು ಪ್ರಧಾನ್ ಹೇಳಿದ್ದಾರೆ.
‘ಪರೀಕ್ಷೆಯಲ್ಲಿ ಶೂನ್ಯ ಲೋಪ ಯೋಜನೆಯ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಇಸ್ರೊದ ಮಾಜಿ ಅಧ್ಯಕ್ಷ ಕೆ.ರಾಧಾಕೃಷ್ಣನ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಯು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯ ಸುಧಾರಣೆಗೆ ಸಲಹೆಗಳನ್ನು ನೀಡಲಿದೆ. ಇದು ಕೈಸೇರಿದ ನಂತರ ಪರೀಕ್ಷೆಗಳನ್ನು ನಡೆಸುವ ಕುರಿತು ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.
‘ಸದ್ಯ ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಯ ಹೊಣೆಯನ್ನು ಸಿಬಿಐ ವಹಿಸಿಕೊಂಡಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಭೇಟಿಯಾಗುತ್ತಿದ್ದೇವೆ’ ಎಂದು ಹೇಳಿದ್ದಾರೆ.
ನೀಟ್–ಯುಜಿ ಪರೀಕ್ಷೆಯನ್ನು ಎನ್‌ಟಿಎ ಮೇ 5ರಂದು ನಡೆಸಿತ್ತು. ದೇಶದಾದ್ಯಂತ ಒಟ್ಟು 24 ಲಕ್ಷ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಜೂನ್ 4ರಂದು ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿತ್ತು. ಬಿಹಾರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ ಎಂಬ ಕೂಗು ಕೇಳಿಬಂದಿತ್ತು. ಈ ವಿವಾದದ ಬೆನ್ನಲ್ಲೇ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಡೆಸುವ ರಾಷ್ಟ್ರೀಯ ಮಾನ್ಯತಾ ಪರೀಕ್ಷೆ ಹಾಗೂ ನೀಟ್–ಪಿಜಿ ಪ್ರವೇಶ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಮುಂದೂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.