ಜೈಪುರ: ವೈದ್ಯಕೀಯ ಕೋರ್ಸ್‌ನ ಪ್ರವೇಶಕ್ಕೆ ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ಕೆಲವರಿಗೆ ಹೆಚ್ಚು ಅಂಕಗಳು ಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹಲವು ನೀಟ್ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಈ ಕಾರಣದಿಂದಲೇ ಒಂದೇ ಪರೀಕ್ಷಾ ಕೇಂದ್ರದ 6 ಅಭ್ಯರ್ಥಿಗಳು ಸೇರಿದಂತೆ 67 ಅಭ್ಯರ್ಥಿಗಳು ಪ್ರಥಮ ರ್‍ಯಾಂಕ್ ಪಡೆಯಲು ಸಾಧ್ಯವಾಗಿದೆ ಎಂದು ಅವರು ದೂರಿದ್ದಾರೆ.
ಆದರೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಈ ಕುರಿತ ಯಾವುದೇ ಆರೋಪಗಳನ್ನು ನಿರಾಕರಿಸಿದೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಆಗಿರುವುದು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಸಮಯ ನಷ್ಟವಾದವರಿಗೆ ಗ್ರೇಸ್ ಅಂಕ ದೊರೆತಿರುವುದರಿಂದ ಕೆಲವು ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ ಎಂದು ಹೇಳಿದೆ.
'ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಅಕ್ರಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಒಂದೇ ಕೇಂದ್ರದ ಹಲವು ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದಿರುವುದು ಮತ್ತು ಸಮೀಪದ ರೋಲ್ ನಂಬರ್ ಹೊಂದಿರುವ ವಿದ್ಯಾರ್ಥಿಗಳು ಅಗ್ರಸ್ಥಾನ ಪಡೆದಿರುವುದು ಸೇರಿದಂತೆ ಇಂತಹ ಹಲವು ಅಂಶಗಳನ್ನು ಗಮನಿಸಿದರೆ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ಬಲವಾಗಿದೆ. ಇದು ಲಕ್ಷಾಂತರ ಮಕ್ಕಳ ಭವಿಷ್ಯ ಮತ್ತು ವೈದ್ಯಕೀಯ ವೃತ್ತಿಯ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಎಲ್ಲರಿಗೂ ನ್ಯಾಯ ಒದಗಿಸಬೇಕು' ಎಂದು ಗೆಹಲೋತ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎನ್‌ಟಿಎ ಬುಧವಾರ ಸಂಜೆ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಹರಿಯಾಣದ ಒಂದೇ ಪರೀಕ್ಷಾ ಕೇಂದ್ರದ ಆರು ಅಭ್ಯರ್ಥಿಗಳು ಸೇರಿದಂತೆ ದೇಶದಾದ್ಯಂತ 67 ಅಭ್ಯರ್ಥಿಗಳು ಮೊದಲ ರ್‍ಯಾಂಕ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.