ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ‘ನೀಟ್–ಯುಜಿ’ ವೃತ್ತಿಪರ ಪರೀಕ್ಷೆಯಲ್ಲ, ಬದಲಿಗೆ ಅದು ಶ್ರೀಮಂತರಿಗಾಗಿ ವಿನ್ಯಾಸಗೊಳಿಸಿರುವ ‘ವಾಣಿಜ್ಯ' ಪರೀಕ್ಷೆಯಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಅವರು ನೀಟ್ ಅಕ್ರಮಗಳ ಕುರಿತು ಪ್ರಸ್ತಾಪಿಸಿದರು.
‘ನೀಟ್ ಅನ್ನು ಶ್ರೀಮಂತ ವಿದ್ಯಾರ್ಥಿಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆಯೇ ಹೊರತು ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಅಲ್ಲ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ. ಹೀಗಾಗಿ ಅವರಿಗೆ ನೀಟ್ ಬಗ್ಗೆ ನಂಬಿಕೆಯೇ ಇಲ್ಲದಂತಾಗಿದೆ’ ಎಂದು ಅವರು ಹೇಳಿದರು.
ಈ ವರ್ಷದ ನೀಟ್ ಅಕ್ರಮಗಳ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಏಳು ವರ್ಷಗಳಲ್ಲಿ 70 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ. ಆದರೆ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆಸಕ್ತಿಯೇ ಇಲ್ಲದ ಸರ್ಕಾರ, ಈ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಕಿಡಿಕಾರಿದರು.
‘ನೀಟ್ ವಿದ್ಯಾರ್ಥಿಗಳು ಪರೀಕ್ಷೆಗಾಗಿ ವರ್ಷಗಟ್ಟಲೆ ತಯಾರಿ ನಡೆಸಿರುತ್ತಾರೆ. ಅವರ ಕುಟುಂಬದವರು ಆರ್ಥಿಕ ಮತ್ತು ಭಾವನಾತ್ಮಕ ಬೆಂಬಲ ನೀಡಿರುತ್ತಾರೆ. ಆದರೆ ನಿಜವೇನೆಂದರೆ, ನೀಟ್ ಬರೆಯುವ ಬಹುತೇಕ ವಿದ್ಯಾರ್ಥಿಗಳು ಈ ಪರೀಕ್ಷೆಯು ಶ್ರೀಮಂತರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ನಂಬುತ್ತಾರೆ. ನಾನು ಭೇಟಿ ಮಾಡಿದ ಬಹುತೇಕ ವಿದ್ಯಾರ್ಥಿಗಳದ್ದು ಇದೇ ಅಭಿಪ್ರಾಯವಾಗಿದೆ’ ಎಂದು ರಾಹುಲ್ ತಿಳಿಸಿದರು.
ನೀಟ್‌ನಲ್ಲಿ ವಿದ್ಯಾರ್ಥಿ ಹೆಚ್ಚು ಅಂಕಗಳನ್ನು ಪಡೆದು ಉನ್ನತ ಸ್ಥಾನ ಪಡೆಯಬಹುದು. ಆದರೆ, ಹಣವಿಲ್ಲದಿದ್ದರೆ ಅವರು ವೈದ್ಯಕೀಯ ಕಾಲೇಜಿಗೆ ಹೋಗಲು ಸಾಧ್ಯವಿಲ್ಲ. ಇಡೀ ಪರೀಕ್ಷೆಯನ್ನು ಶ್ರೀಮಂತ ವಿದ್ಯಾರ್ಥಿಗಳಿಗೆ ‘ಕಸ್ಟಮೈಸ್’ ಆಗಿ ರೂಪಿಸಲಾಗಿದೆ. ಸಂಪೂರ್ಣ ಪರೀಕ್ಷೆಯನ್ನು ಕೇಂದ್ರೀಕರಿಸಲಾಗಿದೆ. ಇದರಲ್ಲಿ ಸಹಸ್ರಾರು ಕೊಟಿ ರೂಪಾಯಿಗಳು ಹರಿದಾಡುತ್ತಿವೆ, ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿವೆ, ಅಕ್ರಮಗಳು ನಡೆಯುತ್ತಿವೆ ಎಂದು ಅವರು ಹರಿಹಾಯ್ದರು.
ಚರ್ಚೆಗೆ ಆಗ್ರಹ ಸಭಾತ್ಯಾಗ:
ಲೋಕಸಭೆಯಲ್ಲಿ ದಿನದ ಕಲಾಪ ಆರಂಭವಾಗುತ್ತಿದ್ದಂತೆ ‘ನೀಟ್’ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಪ್ರತ್ಯೇಕವಾಗಿ ಒಂದು ದಿನದ ಚರ್ಚೆಗೆ ಆಗ್ರಹಿಸಿದ ವಿರೋಧ ಪಕ್ಷಗಳ ಸದಸ್ಯರು ಈ ಕುರಿತು ಸರ್ಕಾರದಿಂದ ಸ್ಪಷ್ಟ ಭರವಸೆಗೆ ಒತ್ತಾಯಿಸಿ ಸಭಾತ್ಯಾಗ ಮಾಡಿದರು.
ಕಲಾಪದ ಆರಂಭದಲ್ಲಿ ರಾಹುಲ್ ಗಾಂಧಿ ಅವರು ನಿಟ್ ಅಕ್ರಮಗಳ ಕುರಿತ ವಿಷಯ ಪ್ರಸ್ತಾಪಿಸಿದರು. ‘ನಾವು ನೀಟ್ ಕುರಿತು ಒಂದು ದಿನದ ಚರ್ಚೆ ಬಯಸಿದ್ದೇವೆ. ಇದು ಅತ್ಯಂತ ಪ್ರಮುಖ ವಿಷಯ. ಎರಡು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ನಾವು ಸಂಸತ್ತಿನಿಂದ ವಿದ್ಯಾರ್ಥಿಗಳಿಗೆ ಸಂದೇಶ ರವಾನಿಸಬಹುದಾಗಿದೆ’ ಎಂದರು.
ರಕ್ಷಣಾ ಸಚಿವ ರಾಜನಾಥ ಸಿಂಗ್ ಮಾತನಾಡಿ, ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಮುಗಿಯವವರೆಗೆ ಸದನದಲ್ಲಿ ಪ್ರತ್ಯೇಕ ವಿಷಯದ ಮೇಲೆ ಚರ್ಚೆ ನಡೆಸಲು ಆಗುವುದಿಲ್ಲ ಎಂದರು. ವಂದನಾ ನಿರ್ಣಯ ಅಂಗೀಕಾರವಾದ ಬಳಿಕ ಇತರ ವಿಷಯಗಳನ್ನು ಪ್ರಸ್ತಾಪಿಸಬಹುದು ಎಂದು ಸಿಂಗ್ ಹೇಳಿದರು.
‘ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಬೇರೆ ವಿಷಯಗಳನ್ನು ಚರ್ಚಿಸುವ ಸಂಪ್ರದಾಯವಿಲ್ಲ’ ಎಂದ ಸ್ಪೀಕರ್ ಓಂ ಬಿರ್ಲಾ ಅವರು, ನೀಟ್ ಮೇಲಿನ ಚರ್ಚೆಗೆ ಸದಸ್ಯರು ಪ್ರತ್ಯೇಕ ನೋಟಿಸ್ ನೀಡಬಹುದು ಎಂದರು.
ಈ ಕುರಿತು ಸರ್ಕಾರದಿಂದ ಸಷ್ಟ ಭರವಸೆ ಅಗತ್ಯವಿದೆ ಎಂದು ಪಟ್ಟು ಹಿಡಿದ ಪ್ರತಿಪಕ್ಷದ ಸದಸ್ಯರು, ಬಳಿಕ ಸಭಾತ್ಯಾಗ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.