ADVERTISEMENT

NEET-UG ಅಕ್ರಮ: ಬಿಹಾರದ 17 ವಿದ್ಯಾರ್ಥಿಗಳು ಡಿಬಾರ್

ಪಿಟಿಐ
Published 23 ಜೂನ್ 2024, 17:01 IST
Last Updated 23 ಜೂನ್ 2024, 17:01 IST
   

ನವದೆಹಲಿ: ನೀಟ್–ಯುಜಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈ ನಡುವೆ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯ ಸಿಕ್ಕ ಹಿನ್ನೆಲೆಯಲ್ಲಿ ಬಿಹಾರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ 17 ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಡಿಬಾರ್ ಮಾಡಿದೆ.

ಇದೇವೇಳೆ, ಮೇ 5ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದು ಮಾಡಬೇಕೆಂದು ಒಂದು ವರ್ಗದ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಶಿಕ್ಷಣ ಸಚಿವಾಲಯ, ಕೆಲವೆಡೆ ಅಕ್ರಮ ನಡೆದಿರುವ ಕಾರಣಕ್ಕೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವ ಲಕ್ಷಾಂತರ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸುವುದು ಬೇಡ ಎಂಬ ಅಭಿಪ್ರಾಯಕ್ಕೆ ಬಂದಿತ್ತು.

ಕೃಪಾಂಕ ಪಡೆದಿದ್ದ 1,563 ವಿದ್ಯಾರ್ಥಿಗಳಿಗೆ ಇಂದು ನಡೆದ ಮರುಪರೀಕ್ಷೆಯಲ್ಲಿ 813 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು.

ADVERTISEMENT

ಮೇ 5ರಂದು ಪರೀಕ್ಷೆ ಆರಂಭ ವಿಳಂಬವಾದ್ದರಿಂದ 6 ಪರೀಕ್ಷಾ ಕೇಂದ್ರಗಳ 1,563 ವಿದ್ಯಾರ್ಥಿಗಳಿಗೆ ಲಾಸ್ ಆಫ್ ಟೈಮ್ ಆಧಾರದ ಮೇಲೆ ಕೃಪಾಂಕ ನೀಡಲಾಗಿತ್ತು.

ಈ ಪೈಕಿ ಕೃಪಾಂಕ ಪಡೆದ ಹರಿಯಾಣದ ಒಂದೇ ಸೆಂಟರ್‌ನ 6 ವಿದ್ಯಾರ್ಥಿಗಳು ಇತರೆ 61 ವಿದ್ಯಾರ್ಥಿಗಳ ಜೊತೆ 720 ಅಂಕ ಪಡೆದಿದ್ದರು.

'1,563 ಅಭ್ಯರ್ಥಿಗಳ ಪೈಕಿ 'ಕನಿಷ್ಠ ಶೇಕಡ 52ರಷ್ಟು ಅಂದರೆ 813 ಅಭ್ಯರ್ಥಿಗಳು ಭಾನುವಾರ ಮರು ಪರೀಕ್ಷೆಗೆ ಹಾಜರಾಗಿದ್ದರು. ಚಂಡೀಗಢದಲ್ಲಿ ಯಾವುದೇ ಅಭ್ಯರ್ಥಿ ಕಾಣಿಸಿಕೊಂಡಿಲ್ಲ, ಆದರೆ, ಛತ್ತೀಸಗಢ (291), ಗುಜರಾತ್ (1), ಹರಿಯಾಣ (287) ಮತ್ತು ಮೇಘಾಲಯದಿಂದ(234) ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ’ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯ(ಎನ್‌ಟಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೀಟ್‌–ಯುಜಿ ಪರೀಕ್ಷೆ ಬರೆದಿದ್ದ 25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಪೈಕಿ 13 ಲಕ್ಷಕ್ಕೂ ಅಧಿಕ ಮಂದಿ ಅರ್ಹತೆ ಪಡೆದಿದ್ದು, 1.8 ಲಕ್ಷದಷ್ಟಿರುವ ವೈದ್ಯಕೀಯ/ದಂತ ವೈದ್ಯಕೀಯ ಸೀಟುಗಳಿಗೆ ಸ್ಪರ್ಧೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.