ADVERTISEMENT

ನೀಟ್‌ ಅಕ್ರಮ: ಶಿಕ್ಷಕ ಪೊಲೀಸ್‌ ಕಸ್ಟಡಿಗೆ

ಪಿಟಿಐ
Published 25 ಜೂನ್ 2024, 16:07 IST
Last Updated 25 ಜೂನ್ 2024, 16:07 IST
ನೀಟ್‌
ನೀಟ್‌   

ಲಾತೂರ್‌ (ಮಹಾರಾಷ್ಟ್ರ): ನೀಟ್‌–ಯುಜಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ಪಡೆ ಬಂಧಿಸಿದ್ದ ಜಿಲ್ಲಾ ಪರಿಷತ್‌ ಶಾಲೆಯ ಶಿಕ್ಷಕರೊಬ್ಬರನ್ನು ಇಲ್ಲಿನ ನ್ಯಾಯಾಲಯ ಜುಲೈ 2ರವರೆಗೆ ಪೊಲೀಸ್‌ ಕಸ್ಟಡಿಗೆ ಒ‍ಪ್ಪಿಸಿದೆ. 

ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಶಿಕ್ಷಕ ಸಂಜಯ್‌ ಜಾಧವ್‌ ಅವರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದರು. ಮಂಗಳವಾರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. 

ಮೇ 5ರಂದು ನಡೆದಿದ್ದ ‘ನೀಟ್‌’ನಲ್ಲಿ ಹಣ ನೀಡಲು ಸಿದ್ಧವಿದ್ದ ಅಭ್ಯರ್ಥಿಗಳಿಗೆ ನೆರವಾಗುವುದಕ್ಕಾಗಿ ಅಕ್ರಮ ಜಾಲವೊಂದನ್ನು ನಿರ್ವಹಿಸುತ್ತಿದ್ದ ಆರೋಪದಲ್ಲಿ ಎಟಿಎಸ್‌ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪೈಕಿ ಜಿಲ್ಲಾ ಪರಿಷತ್‌ ಶಾಲೆಯ ಮುಖ್ಯ ಶಿಕ್ಷಕ ಜಲೀಲ್‌ ಖಾನ್‌ ಉಮರ್‌ ಖಾನ್‌ ಪಠಾಣ್‌ ಮತ್ತು ಜಾಧವ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದಾರೆ. 

ADVERTISEMENT

ಪಠಾಣ್‌ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರನ್ನೂ ಜುಲೈ 2ರವರೆಗೆ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿತ್ತು. 

ನೀಟ್‌ ರದ್ದತಿಗೆ ಎಸ್‌ಪಿ ಆಗ್ರಹ (ಲಖನೌ ವರದಿ): ನೀಟ್‌–ಯುಜಿ ಅಕ್ರಮದ ವಿರುದ್ಧ ಮಂಗಳವಾರ ಲಖನೌದಲ್ಲಿ ಪ್ರತಿಭಟನೆ ನಡೆಸಿರುವ ಸಮಾಜವಾದಿ ಪಕ್ಷದ ಯುವ ಘಟಕ, ನೀಟ್‌ ರದ್ದು ಮಾಡಬೇಕು ಮತ್ತು ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. 

ಪಕ್ಷದ ಪ್ರಧಾನ ಕಚೇರಿಯಿಂದ ಮೆರಣಿಗೆ ಆರಂಭಿಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೆರವಣಿಗೆ ತಡೆಯಲು ವಿಕ್ರಮಾದಿತ್ಯ ಮಾರ್ಗದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರವನ್ನು ನಡೆಸಿದರಲ್ಲದೆ, ಎಲ್ಲರನ್ನೂ ವಶಕ್ಕೆ ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.