ADVERTISEMENT

NEET-UG: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಫಲಿತಾಂಶ ಪ್ರಕಟಿಸಿದ ಎನ್‌ಟಿಎ

ಡೆಕ್ಕನ್ ಹೆರಾಲ್ಡ್
Published 20 ಜುಲೈ 2024, 9:17 IST
Last Updated 20 ಜುಲೈ 2024, 9:17 IST
   

ನವದೆಹಲಿ: ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಟ್‌–ಯುಜಿ ಪರೀಕ್ಷೆ 2024ರ ಫಲಿತಾಂಶಗಳನ್ನು ಶನಿವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಪ್ರಕಟಿತ ಫಲಿತಾಂಶಗಳನ್ನು ಇಲ್ಲಿ ನೋಡಬಹುದಾಗಿದೆ: https://neet.ntaonline.in/frontend/web/common-scorecard/index

ಪ್ರಸಕ್ತ ಸಾಲಿನ ‘ನೀಟ್‌–ಯುಜಿ’ಯ ಕೇಂದ್ರವಾರು ಮತ್ತು ನಗರವಾರು ಫಲಿತಾಂಶವನ್ನು ಜುಲೈ 20ರ ಮಧ್ಯಾಹ್ನ 12 ಗಂಟೆಯೊಳಗೆ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ನಿರ್ದೇಶಿಸಿತ್ತು. ಈ ವೇಳೆ ಪರೀಕ್ಷಾರ್ಥಿಗಳ ಗುರುತನ್ನು ಬಹಿರಂಗಪಡಿಸಬಾರದು ಎಂದೂ ಸೂಚಿಸಿತ್ತು.

ADVERTISEMENT

ಮೇ 5ರಂದು ನಡೆದ ‘ನೀಟ್‌–ಯುಜಿ’ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳು ವ್ಯಕ್ತವಾಗಿರುವ ಕಾರಣ ಇಡೀ ಪರೀಕ್ಷೆಯನ್ನು ರದ್ದುಗೊಳಿಸಬೇಕು, ಮರು ಪರೀಕ್ಷೆ ನಡೆಸಬೇಕು ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ 40ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಗುರುವಾರ ವಿಚಾರಣೆ ನಡೆಸಿತ್ತು.

ದಿನವಿಡೀ ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ, ಮನೋಜ್‌ ಮಿಶ್ರಾ ಅವರ ಪೀಠವು, ಬೃಹತ್‌ ಜಾಲವಿಲ್ಲದೆ ಪ್ರಶ್ನೆಪತ್ರಿಕೆ ಸೋರಿಕೆ ಸಾಧ್ಯವಿಲ್ಲ ಎಂದು ಹೇಳಿತ್ತು. ಅರ್ಜಿಗಳ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತ್ತು.

‌ ಏನಿದು ಪ್ರಕರಣ?:

ಮೇ 5ರಂದು, ದೇಶದ 571 ನಗರಗಳು ಸೇರಿದಂತೆ ವಿದೇಶಗಳಲ್ಲಿನ 14 ಕಡೆಗಳಲ್ಲಿನ 4,750 ಕೇಂದ್ರಗಳಲ್ಲಿ ನೀಟ್‌–ಯುಜಿ ಪರೀಕ್ಷೆ ನಡೆದಿತ್ತು. ಸುಮಾರು 23.33 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಕೆಲ ಅಭ್ಯರ್ಥಿಗಳು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.