ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ, 2024–25ನೇ ಶೈಕ್ಷಣಿಕ ಸಾಲಿನ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಜುಲೈ ಮೂರನೇ ವಾರದಿಂದ ನಾಲ್ಕು ಸುತ್ತುಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.
ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುತ್ತಿರುವ ವೇಳೆ ಅಥವಾ ನಂತರದಲ್ಲಿ, ಯಾವುದೇ ಅಭ್ಯರ್ಥಿಯು ಪರೀಕ್ಷಾ ಅಕ್ರಮದಿಂದ ಲಾಭ ಪಡೆದಿರುವುದು ಪತ್ತೆಯಾದಲ್ಲಿ, ಅಂತಹ ಅಭ್ಯರ್ಥಿಯನ್ನು ಇಡೀ ಪ್ರಕ್ರಿಯೆಯಿಂದ ಕೈಬಿಡಲಾಗುವುದು ಎಂದೂ ಕೇಂದ್ರ ಸರ್ಕಾರ ತಿಳಿಸಿದೆ.
‘ನೀಟ್–ಯುಜಿ’ಯಲ್ಲಿ ವ್ಯಾಪಕ ಅಕ್ರಮ ಅಥವಾ ಒಂದು ನಿರ್ದಿಷ್ಟ ಸಂಖ್ಯೆಯ ಅಭ್ಯರ್ಥಿಗಳಿಗೆ ಪ್ರಯೋಜನವಾಗಿರುವ ಯಾವುದೇ ಅಂಶಗಳು ಪರೀಕ್ಷಾ ಫಲಿತಾಂಶದ ದತ್ತಾಂಶಗಳ ವಿಶ್ಲೇಷಣೆಯಲ್ಲಿ ಕಂಡುಬಂದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಕೇಂದ್ರ ತಿಳಿಸಿದೆ.
‘ನೀಟ್–ಯುಜಿ 2024’ರ ಫಲಿತಾಂಶದ ವಿಶ್ಲೇಷಣೆಯನ್ನು ಐಐಟಿ–ಮದ್ರಾಸ್ ತಜ್ಞರು ನಡೆಸಿದ್ದಾರೆ ಎಂದೂ ಹೇಳಿದೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಕೂಡ ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಿದ್ದು, ಪರೀಕ್ಷಾ ಕೇಂದ್ರ, ನಗರ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನೀಟ್–ಯುಜಿ ಫಲಿತಾಂಶದ ವಿಶ್ಲೇಷಣೆ ನಡೆಸಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.