ADVERTISEMENT

NEET: ರಾಜಸ್ಥಾನದ ಸಿಕರ್‌ನ 2,037 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಸಾಧ್ಯತೆ!

ಪಿಟಿಐ
Published 20 ಜುಲೈ 2024, 16:25 IST
Last Updated 20 ಜುಲೈ 2024, 16:25 IST
ನೀಟ್
ನೀಟ್   

ನವದೆಹಲಿ: ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಅಗತ್ಯವಾದ ನೀಟ್‌–ಯುಜಿ ಪರೀಕ್ಷೆಯಲ್ಲಿ ರಾಜಸ್ಥಾನದ ಸಿಕರ್ ಎಂಬಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅಂಕವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಇದೆ ಎಂದು ತಜ್ಞರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಶನಿವಾರ ಪ್ರಕಟವಾದ ಕೇಂದ್ರವಾರು ಫಲಿತಾಂಶದಲ್ಲಿ ಸಿಕರ್ ಕೇಂದ್ರವೊಂದರಲ್ಲಿ 75 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ. ಅರಾವಳಿ ಪಬ್ಲಿಕ್ ಶಾಲೆಯಲ್ಲಿ 942 ವಿದ್ಯಾರ್ಥಿಗಳ ಪೈಕಿ 90 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು, ಏಳು ವಿದ್ಯಾರ್ಥಿಗಳು 700ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

ಮೋದಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೆಂಟರ್‌ನಲ್ಲಿ 110 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಹೀಗೆ ಸಿಕರ್‌ನಲ್ಲಿ ಒಟ್ಟು 27 ಸಾವಿರ ವಿದ್ಯಾರ್ಥಿಗಳಿದ್ದು, 4200 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 

ADVERTISEMENT

ದೇಶದಲ್ಲಿ ಒಟ್ಟು 23.22 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದು 30,204 ವಿದ್ಯಾರ್ಥಿಗಳು 650ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಇವರಲ್ಲಿ 30,000 ರ‍್ಯಾಂಕ್‌ ಒಳಗಿರುವವರಿಗೆ ಮಾತ್ರ ವೈದ್ಯಕೀಯ ಸೀಟುಗಳು ಸಿಗುವ ಸಾಧ್ಯತೆ ಹೆಚ್ಚು. ಇದರಲ್ಲಿ ಸಿಕರ್‌ನಲ್ಲಿ ಪರೀಕ್ಷೆ ಬರೆದ 2,037 ವಿದ್ಯಾರ್ಥಿಗಳಿಗೆ ಈ ಅವಕಾಶ ಸಿಗಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ಮೇ 5ರಂದು ನಡೆದ ಪರೀಕ್ಷೆಯ ಫಲಿತಾಂಶ ಜೂನ್ 4ರಂದು ಪ್ರಕಟಿಸಲಾಗಿತ್ತು. ಪರೀಕ್ಷೆಯಲ್ಲಿ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಕೆಲವು ಕೇಂದ್ರಗಳ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಕೃಪಾಂಕ ನೀಡಿರುವ ಆರೋಪ ಕೇಳಿಬಂದಿತ್ತು. ಇದರ ವಿರುದ್ಧ ಕೆಲ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ನಗರ ಹಾಗೂ ಕೇಂದ್ರವಾರು ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.