ADVERTISEMENT

NEET-UG ಅಕ್ರಮ: ಪಟ್ನಾದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ

ಪಿಟಿಐ
Published 27 ಜೂನ್ 2024, 10:36 IST
Last Updated 27 ಜೂನ್ 2024, 10:36 IST
ನೀಟ್
ನೀಟ್   

ನವದೆಹಲಿ: ನೀಟ್‌ –ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಬಿಹಾರದ ಪಟ್ನಾದಲ್ಲಿ ಇಬ್ಬರನ್ನು ಬಂಧಿಸಿದೆ.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ಸಿಬಿಐ ಮಾಡಿರುವ ಮೊದಲ ಬಂಧನ ಇದಾಗಿದೆ. 

‘ಮನೀಶ್ ಕುಮಾರ್‌ ಮತ್ತು ಅಶುತೋಷ್‌ ಕುಮಾರ್ ಬಂಧಿತ ಆರೋಪಿಗಳು. ಇವರಿಬ್ಬರೂ ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳಿಗೆ ಹಾಸ್ಟೆಲ್‌ ಒಂದರಲ್ಲಿ ವಸತಿ ವ್ಯವಸ್ಥೆ ಮಾಡಿದ್ದರು. ಅಲ್ಲಿ, ಸೋರಿಕೆಯಾದ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳನ್ನು ಅವರಿಗೆ ನೀಡಲಾಗಿತ್ತು’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ADVERTISEMENT

‘ಇಬ್ಬರನ್ನೂ ಪಟ್ನಾದ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. 

ಹೆಚ್ಚಿನ ವಿಚಾರಣೆಗಾಗಿ ಸಿಬಿಐ ಇಬ್ಬರನ್ನೂ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಿದೆ.  

‘ಅಶುತೋಷ್‌ ಕುಮಾರ್ ಅವರು ‘ಲರ್ನ್‌ ಬಾಲಕರ ಹಾಸ್ಟೆಲ್‌ ಮತ್ತು ಪ್ಲೇ ಸ್ಕೂಲ್‌’ ಅನ್ನು ಬಾಡಿಗೆಗೆ ಪಡೆದಿದ್ದರು. ಬಿಹಾರ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧಗಳ ಘಟಕವು ಈ ಸ್ಥಳದಿಂದ ಅರ್ಧ ಸುಟ್ಟು ಹೋಗಿದ್ದ ನೀಟ್‌ ಪ್ರಶ್ನೆಪತ್ರಿಕೆಗಳನ್ನು ವಶಪಡಿಸಿಕೊಂಡಿತ್ತು’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ನೀಟ್ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಗಳನ್ನು ನೀಡಲು ಈ ಹಾಸ್ಟೆಲ್‌ ಆವರಣವನ್ನು ಬಳಸಲಾಗುತ್ತಿದೆ ಎಂಬುದು ಅಶುತೋಷ್‌ ಕುಮಾರ್ ಅವರಿಗೆ ತಿಳಿದಿತ್ತು ಎಂಬುದನ್ನು ಸಿಬಿಐ ಪತ್ತೆ ಮಾಡಿದೆ. 

‘ಮತ್ತೊಬ್ಬ ಆರೋಪಿ ಮನೀಶ್‌ ಕುಮಾರ್‌ ಅವರು ಪ್ರಶ್ನೆ ಪತ್ರಿಕೆಗಳಿಗೆ ಹಣಕೊಡಲು ಸಿದ್ಧರಿದ್ದ ಅಭ್ಯರ್ಥಿಗಳೊಂದಿಗೆ ‘ವ್ಯವಹಾರ’ ಕುದುರಿಸಿದ್ದರು. ನಂತರ ಅವರು ಅಭ್ಯರ್ಥಿಗಳನ್ನು ಹಾಸ್ಟೆಲ್‌ಗೆ ಕರೆದುಕೊಂಡು ಬಂದಿದ್ದರು. ಅಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳನ್ನು ನೀಡಲಾಗಿತ್ತು. ಅಭ್ಯರ್ಥಿಗಳು ಹಾಸ್ಟೆಲ್‌ನಲ್ಲೇ ಉಳಿದುಕೊಂಡು ಮೇ 5ರಂದು ನಡೆದ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಆರು ಎಫ್ಐಆರ್‌

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಿಬಿಐ ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ. 

ದೇಶದಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಬಿಎಸ್‌, ಬಿಡಿಎಸ್‌, ಆಯುಷ್‌ ಸೇರಿದಂತೆ ಇತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ‘ನೀಟ್‌–ಯುಜಿ’ ನಡೆಸುತ್ತದೆ.

ಈ ವರ್ಷದ ನೀಟ್, ಮೇ 5ರಂದು 571 ನಗರಗಳು, ವಿದೇಶದ 14 ಕೇಂದ್ರಗಳು ಸೇರಿದಂತೆ 4,750 ಕೇಂದ್ರಗಳಲ್ಲಿ ನಡೆದಿತ್ತು. ಸುಮಾರು 23 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 

ನೀಟ್‌ನಲ್ಲಿ ಅಕ್ರಮಗಳು ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದರಿಂದ ಮತ್ತು ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು ಸಿಬಿಐ ತನಿಖೆಗೆ ಆಗ್ರಹಿಸಿದ್ದರಿಂದ ಕೇಂದ್ರ ಆರೋಗ್ಯ ಸಚಿವಾಲಯವು ಇದೇ 22ರಂದು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ತನಿಖಾ ಸಂಸ್ಥೆಯು ಮರುದಿನ ಮೊದಲ ಎಫ್‌ಐಆರ್‌ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.