ADVERTISEMENT

ನೀಟ್‌ ಅಕ್ರಮ: ಶಾಲಾ ಮಾಲೀಕನ ಬಂಧನ

ಪಿಟಿಐ
Published 30 ಜೂನ್ 2024, 16:07 IST
Last Updated 30 ಜೂನ್ 2024, 16:07 IST
ನೀಟ್‌
ನೀಟ್‌   

ಗೋಧ್ರಾ: ‘ನೀಟ್‌–ಯುಜಿ’ ಪರೀಕ್ಷಾ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಭಾನುವಾರ ಗೋಧ್ರಾ ಬಳಿಯಿರುವ ಜಯ ಬಲರಾಮ್‌ ಶಾಲೆಯ ಮಾಲೀಕ ದೀಕ್ಷಿತ್‌ ಪಟೇಲ್‌ ಎಂಬುವರನ್ನು ಬಂಧಿಸಿದೆ.

ಈ ಮೂಲಕ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಆರಕ್ಕೆ ಏರಿದೆ. ಮೇ 5ರಂದು ನಡೆದ ನೀಟ್‌ ಪರೀಕ್ಷೆಗೆ ನಿಗದಿಮಾಡಿದ್ದ ಕೇಂದ್ರಗಳಲ್ಲಿ ಜಯ ಬಲರಾಮ್‌ ಶಾಲೆಯೂ ಒಂದಾಗಿತ್ತು.

ಪಟೇಲ್‌ ಅವರನ್ನು ಪಂಚಮಹಲ್‌ ಜಿಲ್ಲೆಯಲ್ಲಿನ ಅವರ ನಿವಾಸದಿಂದ ಬಂಧಿಸಲಾಯಿತು. ಆ ಬಳಿಕ ಅವರನ್ನು ಅಹಮದಾಬಾದ್‌ನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ತಿಳಿಸಿದ್ದಾರೆ.

ADVERTISEMENT

ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು, ಅಭ್ಯರ್ಥಿಗಳಿಗೆ ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನೆರವು ಮಾಡಲು ತಲಾ ಕನಿಷ್ಠ ₹10 ಲಕ್ಷದಿಂದ ₹ 27 ಲಕ್ಷ ಪಡೆಯುತ್ತಿದ್ದರು ಎಂಬ ಆರೋಪ ಇದೆ.

ಭೌತವಿಜ್ಞಾನ ಶಿಕ್ಷಕ ತುಷಾರ್‌ ಭಟ್‌, ಜಯ ಜಲರಾಮ್‌ ಶಾಲೆಯ ಪ್ರಾಂಶುಪಾಲ ಪುರುಷೋತ್ತಮ್‌ ಶರ್ಮಾ, ಮಧ್ಯವರ್ತಿಗಳಾದ ವಿಭೋರ್‌ ಆನಂದ್‌ ಮತ್ತು ಆರಿಫ್‌ ವೋಹ್ರಾ ಹಾಗೂ ವಡೋದರಾ ಮೂಲದ ಶಿಕ್ಷಣ ಸಲಹೆಗಾರ ಪರಶುರಾಮ್‌ ರಾಯ್‌ ಅವರನ್ನು ಈ ಪ್ರಕರಣದಲ್ಲಿ ಗೋದ್ರಾ ಪೊಲೀಸರು ಈ ಮೊದಲು ಬಂಧಿಸಿದ್ದರು.

ಈ ಪೈಕಿ ಮೊದಲ ನಾಲ್ವರನ್ನು ವಿಚಾರಣೆ ಸಲುವಾಗಿ ಜುಲೈ 2ರವರೆಗೆ ಸಿಬಿಐ ಕಸ್ಟಡಿಗೆ ಪಡೆದಿದೆ. ಅಲ್ಲದೆ ಶನಿವಾರ ಹಿಂದಿ ಪತ್ರಿಕೆಯೊಂದರ ಪತ್ರಕರ್ತ ಜಮಾಲುದ್ದೀನ್‌ ಅನ್ಸಾರಿ ಅವರನ್ನು ಸಿಬಿಐ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.