ನವದೆಹಲಿ: ‘ನೀಟ್–ಯುಜಿ’ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಪಟ್ನಾ ಏಮ್ಸ್‌ನ ನಾಲ್ವರು ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಂಬಿಬಿಎಸ್ ಪದವಿಯ ಮೂರನೇ ವರ್ಷದ ಮೂವರು ಮತ್ತು ಎರಡನೇ ವರ್ಷದ ಒಬ್ಬ ವಿದ್ಯಾರ್ಥಿಯನ್ನು ಸಿಬಿಐ ಕಚೇರಿಗೆ ವಿಚಾರಣೆಗೆಂದು ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ಅಧ್ಯಾಪಕರ ಸಮ್ಮುಖದಲ್ಲಿ ಹಾಸ್ಟೆಲ್ ಕೊಠಡಿಗಳಿಂದ ಅವರನ್ನು ಕರೆದೊಯ್ಯಲಾಯಿತು. ಹಾಸ್ಟೆಲ್‌ನಲ್ಲಿನ ಅವರ ಕೊಠಡಿಗಳನ್ನು ಸೀಲ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಮೂರನೇ ವರ್ಷದ ಎಂಬಿಬಿಎಸ್‌ನ ಚಂದನ್ ಸಿಂಗ್, ರಾಹುಲ್ ಅನಂತ್ ಮತ್ತು ಕುಮಾರ್ ಶಾನು ಹಾಗೂ ಎರಡನೇ ವರ್ಷದ ಕರಣ್ ಜೈನ್ ಎಂಬ ವಿದ್ಯಾರ್ಥಿಗಳನ್ನು ಸಿಬಿಐ ಕರೆದುಕೊಂಡು ಹೋಗಿದೆ’ ಎಂದು ಪಟ್ನಾ ಏಮ್ಸ್‌ನ ನಿರ್ದೇಶಕ ಜಿ.ಕೆ.ಪಾಲ್ ವಿವರಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಸಿಬಿಐ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್ ಹಾಗೂ ರಾಜು ಸಿಂಗ್ ಎಂಬುವವರನ್ನು ಬಂಧಿಸಿತ್ತು. ಬೊಕಾರೊ ನಿವಾಸಿಯಾದ ಪಂಕಜ್ ಕುಮಾರ್ ಅವರನ್ನು ಪಟ್ನಾದಲ್ಲಿ ಹಾಗೂ ಸಹಾಯಕ ರಾಜು ಸಿಂಗ್ ಅವರನ್ನು ಹಜಾರಿಬಾಗ್‌ನಲ್ಲಿ ಬಂಧಿಸಲಾಗಿತ್ತು.
ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಕಚೇರಿಯಲ್ಲಿನ ಪೆಟ್ಟಿಗೆಯಿಂದ ಪ್ರಶ್ನೆಪತ್ರಿಕೆ ಕಳವು ಮಾಡಿದ ಆರೋಪವನ್ನು ಪಂಕಜ್ ಕುಮಾರ್ ಸಿಂಗ್ ಎದುರಿಸುತ್ತಿದ್ದಾರೆ. ಅವರು, ಜೆಮ್‌ಶೆಡ್‌ಪುರದ ಎನ್‌ಐಟಿಯಲ್ಲಿ 2017ರಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.