ADVERTISEMENT

NEET: ಭೌತವಿಜ್ಞಾನ ಪ್ರಶ್ನೆ, ಉತ್ತರ ಪರಿಶೀಲನೆ ಹೊಣೆ ದೆಹಲಿ IIT ಹೆಗಲಿಗೆ- SC

ಪಿಟಿಐ
Published 22 ಜುಲೈ 2024, 15:58 IST
Last Updated 22 ಜುಲೈ 2024, 15:58 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ವೈದ್ಯಕೀಯ ಪ್ರವೇಶಕ್ಕೆ ಕಳೆದ ಮೇ 5ರಂದು ನಡೆಸಲಾದ ನೀಟ್ ಪರೀಕ್ಷೆಯಲ್ಲಿ ಭೌತವಿಜ್ಞಾನಕ್ಕೆ ಸಂಬಂಧಿಸಿದ ಪತ್ರಿಕೆಯಲ್ಲಿನ ನಿರ್ದಿಷ್ಟ ಪ್ರಶ್ನೆ ಕುರಿತು ಮೂರು ತಜ್ಞರ ಸಮಿತಿ ರಚಿಸಿ ಮಂಗಳವಾರ (ಜುಲೈ 23) ಮಧ್ಯಾಹ್ನದೊಳಗೆ ವರದಿ ಸಲ್ಲಿಸುವಂತೆ ದೆಹಲಿ ಐಐಟಿ ನಿರ್ದೇಶಕರಿಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.

ಪರೀಕ್ಷೆಯಲ್ಲಿ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಕೆಲವರಿಗೆ ಕೃಪಾಂಕ ನೀಡಿರುವ ಕುರಿತು ಹಾಗೂ ಮರು ಪರೀಕ್ಷೆಗೆ ಆಗ್ರಹ ಕುರಿತಂತೆ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ದಿನವಿಡೀ ನಡೆದ ವಾದ ಹಾಗೂ ಪ್ರತಿವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್‌, ಒಂದು ನಿರ್ದಿಷ್ಟ ಪ್ರಶ್ನೆ ಸುತ್ತ ಚರ್ಚೆಯನ್ನು ಆಲಿಸಿದ ನಂತರ ಸಮಿತಿ ರಚಿಸಿ ವರದಿ ಸಲ್ಲಿಸಲು ನಿರ್ದೇಶಿಸಿತು.

ADVERTISEMENT

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಅರ್ಜಿಯ ವಿಚಾರಣೆ ನಡೆಸಿದರು. ಪರೀಕ್ಷೆ ಆಯೋಜಿಸಿದ ರೀತಿಯಲ್ಲೇ ಸಮಸ್ಯೆ ಇದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ದಾಖಲೆಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದರು.

ಒಂದೇ ಪ್ರಶ್ನೆಗೆ ಎರಡು ಸರಿಯಾದ ಉತ್ತರ ನೀಡಲಾಗಿತ್ತು. ಇದರಲ್ಲಿ ಒಂದನ್ನು ಆಯ್ಕೆ ಮಾಡಿದರೆ 4 ಅಂಕಗಳನ್ನು ನೀಡಲಾಗಿದೆ. ಈ ಒಂದು ಪ್ರಶ್ನೆಗೆ ಸಂಬಂಧಿಸಿದಂತೆ ಮೂರು ರೀತಿಯ ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಒಂದು ಗುಂಪಿಗೆ ಅಂಕಗಳನ್ನು ಕಳೆಯಲಾಗಿದೆ. ಮತ್ತೊಂದು ಗುಂಪಿಗೆ ಅಂಕಗಳನ್ನು ನೀಡಲಾಗಿದೆ. ಎರಡು ಉತ್ತರದಿಂದ ಗೊಂದಲಕ್ಕೀಡಾದ ವಿದ್ಯಾರ್ಥಿಗಳು ಪ್ರಶ್ನೆಗೆ ಉತ್ತರ ನೀಡದಿರುವ ಮತ್ತೊಂದು ಗುಂಪು ನ್ಯಾಯಾಲಯದ ಮೆಟ್ಟಿಲೇರಿದೆ.

ಈ ಪ್ರಶ್ನೆ ಹಾಗೂ ಅದಕ್ಕೆ ನೀಡಿದ ಉತ್ತರ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಜುಲೈ 23ರ ಮಧ್ಯಾಹ್ನ 12ರೊಳಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಐಐಟಿ ದೆಹಲಿ ನಿರ್ದೇಶಕರಿಗೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.