ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಎನ್‌ಇಇಟಿ–ಯುಜಿ 2024ರ ಪರೀಕ್ಷೆಯನ್ನು ರದ್ದು ಮಾಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ(ಎನ್‌ಟಿಎ) ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.
ಅಂತಹ ಪರೀಕ್ಷೆಗಳ ತಯಾರಿಗಾಗಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟಿರುತ್ತಾರೆ. ಹಾಗಾಗಿ, ಪ್ರಕರಣ ಕುರಿತಂತೆ ಕೂಲಂಕಷ ತನಿಖೆ ನಡೆಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಈ ಸಂಬಂಧ ನ್ಯಾಯಮೂರ್ತಿಗಳ ವಿಕ್ರಮ್ ನಾಥ್, ಎಸ್.ವಿ.ಎನ್ ಭಟ್ಟಿ ಅವರನ್ನು ಒಳಗೊಂಡ ನ್ಯಾಯಪೀಠ ಕೇಂದ್ರ ಮತ್ತು ಎನ್‌ಟಿಎಗೆ ನೋಡಿಸ್ ಜಾರಿಮಾಡಿದೆ.
ಮೇ 5ರಂದು ನಡೆದಿದ್ದ ಎನ್‌ಇಇಟಿ–ಯುಜಿ 2024ರ ಪರೀಕ್ಷಾ ಫಲಿತಾಂಶ ಜೂನ್ 4ರಂದು ಪ್ರಕಟಗೊಂಡಿತ್ತು.
‘ಪ್ರಕರಣವನ್ನು ಪ್ರತಿಕೂಲವೆಂದು ಪರಿಗಣಿಸಬಾರದು. ಪರೀಕ್ಷಾ ಪ್ರಕ್ರಿಯೆಯಲ್ಲಿ ಶೇಕಡ 0.001ರಷ್ಟು ನಿರ್ಲಕ್ಷ್ಯವಿದ್ದರೂ ಅದನ್ನು ಕೂಲಕಂಕಷವಾಗಿ ತನಿಖೆ ನಡೆಸಬೇಕು’ಎಂದು ನ್ಯಾಯಾಲಯವು ಕೇಂದ್ರ ಮತ್ತು ಎನ್‌ಟಿಎ ಪರ ವಕೀಲರಿಗೆ ಸೂಚಿಸಿದೆ.
‘ಅಕ್ರಮದ ಮೂಲಕ ಉತ್ತೀರ್ಣನಾದ ವಿದ್ಯಾರ್ಥಿ ವೈದ್ಯನಾದರೆ, ಅವನು ಸಮಾಜಕ್ಕೆ ಎಷ್ಟು ಹಾನಿಮಾಡಬಹುದು ಎಂಬುದನ್ನು ಕಲ್ಪಿಸಿಕೊಳ್ಳಿ. ಅಂತಹ ಪರೀಕ್ಷೆಗಳ ತಯಾರಿಗಾಗಿ ವಿದ್ಯಾರ್ಥಿಗಳು ಎಷ್ಟು ಶ್ರಮಪಡುತ್ತಾರೆ ಎಂಬುದು ನಮಗೆ ತಿಳಿದಿದೆ. ನಾವು ಈ ಸಂಬಂಧ ಸಮಯೋಚಿತ ಕ್ರಮಗಳನ್ನು ಬಯಸುತ್ತೇವೆ’ಎಂದು ಪೀಠ ಹೇಳಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜುಲೈ 8ಕ್ಕೆ ನಿಗದಿ ಮಾಡಿದ್ದು, ಪರೀಕ್ಷೆ ರದ್ದು ಮತ್ತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿರುವ ಇತರೆ ಅರ್ಜಿಗಳೂ ಅಂದು ವಿಚಾರಣೆಗೆ ಬರಲಿವೆ.
ಮೇ 5ರಂದು ನಡೆದ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನಂತರ 1563 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಈ ನಡುವೆ ಕೃಪಾಂಕ ಹಿಂಪಡೆದಿರುವ ಎನ್‌ಟಿಎ ಇದೇ 23ರಂದು 1563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.