ADVERTISEMENT

ನೀಟ್‌–ಯುಜಿ | ಕೌನ್ಸೆಲಿಂಗ್‌ಗೆ ತಡೆಯಾಜ್ಞೆ ಇಲ್ಲ–ಸುಪ್ರೀಂ ಕೋರ್ಟ್‌

‘ಇದು ಆರಂಭಿಸಿ, ನಿಲ್ಲಿಸುವ ಪ್ರಕ್ರಿಯೆಯಲ್ಲ‘ ಎಂದ ನ್ಯಾಯಪೀಠ

ಪಿಟಿಐ
Published 21 ಜೂನ್ 2024, 15:54 IST
Last Updated 21 ಜೂನ್ 2024, 15:54 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ನೀಟ್‌ ಯುಜಿ ಪರೀಕ್ಷೆಯ ಹಿಂದೆಯೇ ಜುಲೈ 6ರಿಂದ ನಡೆಸಲು ನಿಗದಿಪಡಿಸಿರುವ ಕೌನ್ಸೆಲಿಂಗ್ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ‘ಕೌನ್ಸೆಲಿಂಗ್ ಆರಂ‌ಭಿಸಿ, ನಿಲ್ಲಿಸುವ ಪ್ರಕ್ರಿಯೆಯಲ್ಲ’ ಎಂದೂ ಹೇಳಿದೆ.

‘ನೀಟ್‌–ಯುಜಿ 2024’ ಪರೀಕ್ಷೆಯಲ್ಲಿ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಪಡಿಸಲು ಕೋರಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಪೀಠ ಶುಕ್ರವಾರ ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿತು.

ಪರೀಕ್ಷೆಯನ್ನೇ ರದ್ದುಪಡಿಸಲು ಕೋರಿದ್ದ ಅರ್ಜಿಗಳಿಗೆ ಸಂಬಂಧಿಸಿ ಉತ್ತರ ನೀಡಲು ಸೂಚಿಸಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ನೋಟಿಸ್‌ ಅನ್ನು ಜಾರಿಮಾಡಿತು.

ADVERTISEMENT

ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್ ಮತ್ತು ಎಸ್‌.ವಿ.ಎನ್‌.ಭಟ್ಟಿ ಅವರಿದ್ದ ರಜಾಕಾಲದ ಪೀಠವು, ಈ ಸಂಬಂಧಿತ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು, ‘ನಾವು ಕೌನ್ಸೆಲಿಂಗ್‌ಗೆ ತಡೆ ನೀಡುವಂತೆ ಕೋರುತ್ತಿಲ್ಲ ಪ್ರಕರಣದ ವಿಚಾರಣೆಯು ಜುಲೈ 8ಕ್ಕೆ ಮುಂದೂಡಿರುವ ಕಾರಣ, ಕನಿಷ್ಠ ಎರಡು ದಿನದ ಮಟ್ಟಿಗೆ ಕೌನ್ಸೆಲಿಂಗ್ ಅನ್ನೂ ಮುಂದೂಡಬಹುದು ಎಂದು ಕೋರಿದರು.

‘ನಾವು ಇದೇ ಹೇಳಿಕೆಯನ್ನು ಆಲಿಸುತ್ತಿದ್ದೇವೆ. ನಿಮ್ಮ ಮಾತಿನ ಮಧ್ಯೆ ಹೇಳುತ್ತಿದ್ದೇವೆ ಎಂದು ಭಾವಿಸಬೇಡಿ. ಕೌನ್ಸೆಲಿಂಗ್ ಎಂಬುದು ಆರಂಭಿಸಿ, ನಿಲ್ಲಿಸುವ ಪ್ರಕ್ರಿಯೆಯಲ್ಲ. ಕೌನ್ಸೆಲಿಂಗ್ ಪ್ರಕ್ರಿಯೆ ಜುಲೈ 6ರಂದು ಆರಂಭವಾಗುತ್ತಿದೆ’ ಎಂದು ಪೀಠವು ಸ್ಪಷ್ಟಮಾತುಗಳಲ್ಲಿ ಹೇಳಿತು.

ಮೊದಲ ಸುತ್ತಿನ ಕೌನ್ಸೆಲಿಂಗ್ ಎಷ್ಟು ದಿನ ನಡೆಯಲಿದೆ ಎಂಬ ಪೀಠದ ಪ್ರಶ್ನೆಗೆ, ಸಂಬಂಧಿತ ವಕೀಲರು ಒಂದು ವಾರ ನಡೆಯಬಹುದು ಎಂದು ಹೇಳಿದರು. ಆಗ, ಕನಿಷ್ಠ ಎರಡು ವಾರಗಳಲ್ಲಿ ಎನ್‌ಟಿಕೆ, ಕೇಂದ್ರ ಸರ್ಕಾರ ಪ್ರತಿಕ್ರಿಯೆ ದಾಖಲಿಸಬೇಕು ಎಂದು ಸೂಚಿಸಿತು.

ಈ ಹಂತದಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು, ಜೂನ್‌ 23ರಂದು ನಡೆಸಲು ಉದ್ದೇಶಿಸಿರುವ ಮರು ಪರೀಕ್ಷೆಯ ವಿಷಯವನ್ನು ಉಲ್ಲೇಖಿಸಿದರು. ಎನ್‌ಟಿಎ ಕೆಲ ಮಾಹಿತಿಗಳನ್ನು ತಡೆಹಿಡಿದಿದೆ ಎಂದು ಆರೋಪಿಸಿದರು.  

ಕೇಂದ್ರ ಸರ್ಕಾರವು ಜೂನ್‌ 13ರಂದು, ‘1,563 ಅಭ್ಯರ್ತಿಗಳಿಗೆ ನೀಡಿದ್ದ ಕೃಪಾಂಕವನ್ನು ರದ್ದುಪಡಿಸಲಾಗಿದೆ. ಅವರಿಗೆ ಜೂನ್‌ 23ರಂದು ಮರುಪರೀಕ್ಷೆಗೆ ಹಾಜರಾಗುವ ಆಯ್ಕೆ ನೀಡಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತ್ತು.

ಶುಕ್ರವಾರ ಈ ವಿಷಯವನ್ನು ಪ್ರಸ್ತಾಪಿಸಿದ ವಕೀಲರು, ಮರು ಪರೀಕ್ಷೆಯನ್ನು ನಡೆಸುವುದರಿಂದ ಅಭ್ಯರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಲಿದ್ದಾರೆ ಎಂದು ಹೇಳಿದರು.

‘ಮೇ 5ರ ಮುಖ್ಯಪರೀಕ್ಷೆ ರದ್ದುಪಡಿಸುವುದು ಸಾಧ್ಯವಿದ್ದರೆ, ಎಲ್ಲವನ್ನು ರದ್ದುಪಡಿಸುವುದು ಸಾಧ್ಯವಿದೆ’ ಎಂದು ಪೀಠ ಈ ಹಂತದಲ್ಲಿ ಅಭಿಪ್ರಾಯಪಟ್ಟಿತು. ಅಲ್ಲದೆ, ‘ಪರೀಕ್ಷೆಗೆ ಅವಕಾಶ ಸಿಗದ ಇತರೆ ಅಭ್ಯರ್ಥಿಗಳ ಬಗ್ಗೆಯೂ ನಿಮಗೆ ಕಾಳಜಿ ಇದೆಯೇ’ ಎಂದು ಪ್ರಶ್ನಿಸಿತು.

ವೈದ್ಯಕೀಯ, ದಂತವೈದ್ಯಕೀಯ, ಆಯುಷ್‌ ಮತ್ತು ಇತರೆ ಸಂಬಂಧಿತ ಕೋರ್ಸ್‌ಗಳಿಗೆ ದೇಶದಾದ್ಯಂತ ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಸೀಟುಗಳಿಗೆ ಪ್ರವೇಶ ನೀಡಲು ಮೇ 5ಕ್ಕೆ ನೀಟ್‌–ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ಎನ್‌ಟಿಎ ಇತಿಹಾಸದಲ್ಲಿಯೇ ಮೊದಲ ಬಾರಿಗೆ 67 ವಿದ್ಯಾರ್ಥಿಗಳು 720 ಅಂಕಗಳಿಸಿ ಮೊದಲ ರ‍್ಯಾಂಕ್ ಹಂಚಿಕೊಂಡಿದ್ದರು. ಇವರಲ್ಲಿ ಆರು ಅಭ್ಯರ್ಥಿಗಳು ಹರಿಯಾಣದ ಫರಿದಾಬಾದ್‌ನವರೇ ಇದ್ದುದು ಅಕ್ರಮ ನಡೆದಿರುವ ಶಂಕೆ ಮೂಡಲು ಕಾರಣವಾಗಿತ್ತು.

‘ಜೂನ್ 23ರ ಮರುಪರೀಕ್ಷೆಗೆ ತಡೆಯಾಜ್ಞೆಗೂ ನಕಾರ’
ಕೃಪಾಂಕ ರದ್ದತಿ ಬಳಿಕ 1563 ಅಭ್ಯರ್ಥಿಗಳಿಗೆ ನಡೆಸಲು ಉದ್ದೇಶಿರುವ ನೀಟ್ –ಯುಜಿ ಮರುಪರೀಕ್ಷೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ‘ಅರ್ಜಿದಾರರು ಈ ವಿಚಾರಣೆಯ ಅಂತಿಮ ತೀರ್ಮಾನದವರೆಗೆ ಕಾಯಬೇಕು. ಒಂದು ವೇಳೆ ಅವರಿಗೆ ಜಯ ಲಭಿಸಿದಲ್ಲಿ ಇಡೀ ಪರೀಕ್ಷಾ ಪ್ರಕ್ರಿಯೆಯೇ ರದ್ದಾಗಲಿದೆ’ ಎಂದು ಹೇಳಿತು. ‘ನೀಟ್‌ ಯುಜಿ’ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಎಸ್‌.ವಿ.ಎನ್‌.ಭಟ್ಟಿ ಅವರಿದ್ದ ಪೀಠ ಈ ಮಾತು ಹೇಳಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.