ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸಿದ ನೀಟ್ ಯುಜಿ, ಪಿಜಿ ಮತ್ತು ಯುಜಿಸಿ ನೆಟ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಇಲ್ಲಿನ ಜಂತರ್‌ಮಂತರ್‌ನಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸೋಮವಾರ ಕೊನೆಗೊಂಡಿದೆ.
‘ಎನ್‌ಟಿಎ ವಿರುದ್ಧ ಭಾರತ’ ಎಂಬ ಆಶ್ರಯದಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಕಳೆದ ಬುಧವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು.
ಮುಷ್ಕರದ 6ನೇ ದಿನವಾದ ಇಂದು, ಜಂತರ್ ಮಂತರ್‌ನಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯನ್ನು ವಜಾ ಮಾಡಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಯಾವುದೇ ಕಾರಣ ನೀಡದೆ ತಮ್ಮ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟರು.
ಎಡ ಪಕ್ಷ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟ (AISA), ದೆಹಲಿ ವಿವಿಯ ಕ್ರಾಂತಿಕಾರಿ ಯುವ ಸಂಘಟನೆ (KYS), ದಿಶಾ ವಿದ್ಯಾರ್ಥಿಗಳ ಸಂಸ್ಥೆ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.