ನವದೆಹಲಿ: ‘ನೀಟ್–ಯುಜಿ’ ಅಕ್ರಮಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆದರಷ್ಟೇ ಲಕ್ಷಾಂತರ ಯುವ ಅಭ್ಯರ್ಥಿಗಳ ಭವಿಷ್ಯ ಕಾಪಾಡಲು ಸಾಧ್ಯ ಎಂದು ಅದು ಪುನರುಚ್ಚರಿಸಿದೆ.
‘ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮೂಲಕ ಮೋದಿ ಸರ್ಕಾರವು ನೀಟ್ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಈ ಕುರಿತು ಅವರು ‘ಎಕ್ಸ್’ನಲ್ಲಿ ಈ ಕೆಳಕಂಡ ಕೆಲ ಪ್ರಶ್ನೆಗಳನ್ನು ಎತ್ತಿದ್ದಾರೆ.
* ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಿದ್ದರೆ, ಬಿಹಾರದಲ್ಲಿ ಈ ಸಂಬಂಧ 13 ಆರೋಪಿಗಳನ್ನು ಏಕೆ ಬಂಧಿಸಲಾಯಿತು? ಪಟ್ನಾ ಪೊಲೀಸರ ಆರ್ಥಿಕ ಅಪರಾಧ ಘಟಕವು (ಇಒಯು) ಈ ಪರೀಕ್ಷಾ ಮಾಫಿಯಾವನ್ನು ಬಯಲಿಗೆ ಎಳೆಯಲಿಲ್ಲವೇ? ಪತ್ರಿಕೆಗಳನ್ನು ಬದಲಿಸಲು ₹ 30ರಿಂದ ₹ 50 ಲಕ್ಷ ವ್ಯವಹಾರ ನಡೆಸುತ್ತಿದ್ದ ಸಂಘಟಿತ ಗ್ಯಾಂಗ್‌ಗಳ ದಂಧೆಯನ್ನು ಅದು ಭೇದಿಸಲಿಲ್ಲವೇ?
* ಗುಜರಾತ್‌ನ ಗೋಧ್ರಾದಲ್ಲಿ ‘ನೀಟ್–ಯುಜಿ’ ವಂಚನೆಯ ಜಾಲವನ್ನು ಭೇದಿಸಿಲ್ಲವೇ? ಇದರಲ್ಲಿ ಕೋಚಿಂಗ್ ಸೆಂಟರ್ ನಡೆಸುತ್ತಿರುವ ವ್ಯಕ್ತಿ, ಶಿಕ್ಷಕ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿದಂತೆ ಮೂವರು ಭಾಗಿಯಾಗಿದ್ದಾರಲ್ಲ. ಗುಜರಾತ್ ಪೊಲೀಸರ ಪ್ರಕಾರ, ಈ ಆರೋಪಿಗಳ ನಡುವೆ ಸುಮಾರು ₹ 12 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂಬುದು ಬಹಿರಂಗವಾಗಿದೆಯಲ್ಲ
* ನೀಟ್‌ನಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಿದ್ದರೆ, ಇಷ್ಟೆಲ್ಲ ಜನರನ್ನು ಏಕೆ ಬಂಧಿಸಲಾಗಿದೆ. ಮೋದಿ ಸರ್ಕಾರವು ದೇಶದ ಜನರನ್ನು ಮೋಸಗೊಳಿಸಲು ಯತ್ನಿಸುತ್ತಿದೆಯೇ? ಈ ಹಿಂದೆಯೂ ಅದು ಹೀಗೇ ಮಾಡಿದೆಯೇ?
* ದೇಶದಾದ್ಯಂತ ಲಭ್ಯವಿರುವ 1 ಲಕ್ಷ ವೈದ್ಯಕೀಯ ಸೀಟುಗಳಿಗಾಗಿ ನಡೆದ ನೀಟ್ ಪರೀಕ್ಷೆಯನ್ನು ಸುಮಾರು 24 ಲಕ್ಷ ಅಭ್ಯರ್ಥಿಗಳು ಬರೆದಿದ್ದರು. ಈ 1 ಲಕ್ಷ ಸೀಟುಗಳಲ್ಲಿ ಸುಮಾರು 55,000 ಸೀಟುಗಳು ಸರ್ಕಾರಿ ಕಾಲೇಜುಗಳಲ್ಲಿವೆ. ಅಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಇಡಬ್ಲ್ಯುಎಸ್ ವರ್ಗಗಳಿಗೆ ಸೀಟುಗಳನ್ನು ಮೀಸಲಿಡಲಾಗಿದೆ. ಆದರೆ ಮೋದಿ ಸರ್ಕಾರವು ಈ ಬಾರಿ ಎನ್‌ಟಿಎ ಅನ್ನು ದುರುಪಯೋಗಪಡಿಸಿಕೊಂಡು, ಅಭ್ಯರ್ಥಿಗಳ ಅಂಕಗಳು ಮತ್ತು ಶ್ರೇಣಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಂಚನೆ ಎಸಗಿದೆ. ಇದರ ಪರಿಣಾಮ ಮೀಸಲು ಅಭ್ಯರ್ಥಿಗಳ ಮೇಲೆ ಆಗುತ್ತದೆಯಲ್ಲವೇ?
* ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ಸರ್ಕಾರಿ ಸೀಟುಗಳನ್ನು ವಂಚಿಸಲು ಪ್ರಶ್ನೆ ಪತ್ರಿಕೆ ಸೋರಿಕೆ, ಕೃಪಾಂಕ ಮತ್ತು ಇತರ ವಂಚನೆಗಳ ಆಟ ಆಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.