ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾಗಿರುವ ನೆಹರು ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ ಸದಸ್ಯತ್ವವನ್ನುಕೇಂದ್ರ ಸರ್ಕಾರ ಪುನರ್‌ರಚನೆ ಮಾಡಿದೆ.
ಸದಸ್ಯರ ಸಂಖ್ಯೆಯನ್ನು 34ರಿಂದ 28ಕ್ಕೆ ಕೆಳಗಿಳಿಸಿರುವ ಸರ್ಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸದಸ್ಯತ್ವ ನೀಡಿದೆ. ಆದಾಗ್ಯೂ, ಈ ಸೊಸೈಟಿಯಲ್ಲಿ ಕಾಂಗ್ರೆಸ್ ಪಕ್ಷದವರು ಯಾರೂ ಇಲ್ಲ.
ಇಲ್ಲಿಯವರೆಗೆ ಕಾಂಗ್ರೆಸ್ ನಾಯಕರಾದ ಕರಣ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್ ರಮೇಶ್ ಸೊಸೈಟಿಯ ಸದಸ್ಯರಾಗಿದ್ದರು. ಜೈರಾಮ್ ರಮೇಶ್ ಅವರು ಜವಾಹರ್ ಲಾಲ್ ನೆಹರು ಮೆಮೊರಿಯಲ್ ಫಂಡ್‌ನ ಪ್ರತಿನಿಧಿಯಾಗಿದ್ದರು. ಈ ಬಾರಿಯೂ ನೆಹರು ಮೆಮೊರಿಯಲ್ ಫಂಡ್ ಪ್ರತಿನಿಧಿಯ ಹೊಣೆಯನ್ನು ಕಾಯ್ದಿರಿಸಿದ್ದು, ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
14 ನೂತನ ಸದಸ್ಯರನ್ನು ಇಲ್ಲಿ ನೇಮಕ ಮಾಡಲಾಗುತ್ತಿದ್ದು, ಸಂಪುಟ ಖಾತೆ ಸಚಿವರಿಗೂ ಇಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಸದಸ್ಯತ್ವದ ಕಾಲಾವಧಿ 5 ವರ್ಷಗಳು ಆಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಎಚ್‌ಆರ್‌ಡಿ ಸಚಿವ ರಮೇಶ್ ಪೊಖ್ರಿಯಾಲ್, ಮಾಹಿತಿ ಮತ್ತು ಪ್ರಸಾರಾಂಗ ಸಚಿವ ಪ್ರಕಾಶ್ ಜಾವಡೇಕರ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರ್ ಮತ್ತು ಸಾಂಸ್ಕೃತಿಕ ಸಚಿವ ಪ್ರಹ್ಲಾದ್ ಪಟೇಲ್ ಮೊದಲಾದವರಿಗೆ ಸದಸ್ಯತ್ವ ನೀಡಲಾಗುವುದು.
ಇನ್ನುಳಿದಂತೆ ನೀತಿ ಸಂಶೋಧಕ ಅನಿರ್ಬನ್ ಗಂಗೂಲಿ, ಚಿಂತಕ ಕಪಿಲ್ ಕಪೂರ್ ಮತ್ತು ಕಮಲೇಶ್ ಜೋಶಿಪುರ, ಪತ್ರಕರ್ತ ರಜತ್ ಶರ್ಮಾ, ಲೇಖಕ ಕಿಶೋರ್ ಮಕ್ವಾನ, ಗೀತೆ ರಚನೆಕಾರ ಪ್ರಸೂನ್ ಜೋಷಿ, ಸಂಶೋಧಕ ರಿಜ್ವಾನ್ ಕಾದ್ರಿ ಮತ್ತು ಸಚ್ಚಿದಾನಂದ್ ಜೋಷಿ ಅವರು ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಆಫ್ ದ ಆರ್ಟ್ಸ್‌ನ ಸದಸ್ಯರಾಗಿದ್ದಾರೆ.
ವಿನಯ್ ಸಹಸ್ರಬುದ್ಧೆ, ಎಂಪಿ ಸ್ವಪನ್ ದಾಸ್‌ಗುಪ್ತಾ, ರಾಮ್ ಬಹದ್ದೂರ್ ರಾಯ್, ಪ್ರಸಾರ ಭಾರತಿ ಅಧ್ಯಕ್ಷ ಎ. ಸೂರ್ಯ ಪ್ರಕಾಶ್ ಮತ್ತು ಪ್ರೊಫೆಸರ್ ಲೋಕೇಶ್ ಚಂದ್ರ ಅವರು ಸೊಸೈಟಿಯ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.