ನವದೆಹಲಿ: ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾ್ ನೆಹರೂ ಅವರ ಕುರಿತಂತೆ ನಿರಂತರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿಯುಳ್ಳವರು ಎಂಬುದಾಗಿ ನೆಹರೂ ಭಾವಿಸಿದ್ದರು ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ತಮ್ಮ ಸುಮಾರು 100 ನಿಮಿಷಗಳ ಭಾಷಣದಲ್ಲಿ ಪ್ರಧಾನಿ, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವು ಭಾರತದ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿರಲಿಲ್ಲ ಎಂದು ಟೀಕಿಸಿದ್ದಾರೆ.
‘ಕಾಂಗ್ರೆಸ್ ಪಕ್ಷವು ಒಂದು ಕುಟುಂಬದಲ್ಲಿ ಸಿಲುಕಿಕೊಂಡಿತ್ತು. ದೇಶದ ಜನರ ಆಶಯಗಳು ಮತ್ತು ಸಾಧನೆಗಳನ್ನು ಅವರು ಮನಗಾಣಲು ಅವರಿಗೆ ಸಾಧ್ಯವಾಗಿಲ್ಲ. ಭಾರತದ ಸಾಮರ್ಥ್ಯದಲ್ಲಿ ಅವರು ನಂಬಿಕೆ ಇಟ್ಟಿರಲಿಲ್ಲ. ಅವರು ತಮ್ಮನ್ನು ತಾವು ಯಾವಾಗಲೂ ಆಳುವ ವರ್ಗ ಎಂದು ಭಾವಿಸಿದ್ದರು. ಜನರನ್ನು ಕೀಳಾಗಿ ನೋಡುತ್ತಿದ್ದರು’ಎಂದು ಮೋದಿ ಟೀಕಿಸಿದ್ದಾರೆ.
ನೆಹರೂ ಅವರ ಸ್ವಾತಂತ್ರ್ಯ ದಿನದ ಭಾಷಣವನ್ನು ಉಲ್ಲೇಖಿಸಿದ ಮೋದಿ, 'ನಾವು ಯುರೋಪಿಯನ್ನರು, ಜಪಾನಿಯರು, ಚೀನಿಯರು, ರಷ್ಯನ್ನರು ಅಥವಾ ಅಮೆರಿಕನ್ನರಷ್ಟು ಕಷ್ಟಪಟ್ಟು ಕೆಲಸ ಮಾಡುವುದಿಲ್ಲ. ಈ ಸಮುದಾಯಗಳು ಸಮೃದ್ಧವಾಗಿದ್ದು, ಅವರ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಅದನ್ನು ಸಾಧಿಸಿದ್ದಾರೆ’ಎಂದು ನೆಹರು ಹೇಳಿದ್ದರು ಎಂದಿದ್ದಾರೆ.
‘ನೆಹರೂ ಅವರು ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದವರಿಗೆ ಪರಿಶ್ರಮಿಗಳೆಂದು ಪ್ರಮಾಣಪತ್ರ ನೀಡುತ್ತಿದ್ದರು. ಭಾರತೀಯರನ್ನು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತಿಕೆಯನ್ನು ಹೊಂದಿದ್ದವರೆಂದು ನೆಹರೂ ಯೋಚಿಸುತ್ತಿದ್ದರು ಎಂಬುದನ್ನು ಇದು ತೋರಿಸುತ್ತದೆ. ಅವರು ತಮ್ಮ ದೇಶದ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿರಲಿಲ್ಲ’ಎಂದು ಪ್ರಧಾನಿ ಹೇಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಯೋಚನೆ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ ಎಂದು ಮೋದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.