ನವದೆಹಲಿ: ಎನ್‌ಡಿಎ ಒಕ್ಕೂಟದ ನಾಯಕರಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ, ಜೂನ್ 8ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನೆರೆಯ ಹಲವು ರಾಷ್ಟ್ರಗಳ ಗಣ್ಯರು ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಿರುವುದಕ್ಕೆ ದೂರವಾಣಿ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ತಿಳಿಸಿದ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಈ ಸಂದರ್ಭ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನೀಡಿದ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ ಎಂದು ಶ್ರೀಲಂಕಾದ ಅಧ್ಯಕ್ಷರ ಮಾಧ್ಯಮ ವಿಭಾಗ ತಿಳಿಸಿದೆ.
ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಸಹ ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಬುಧವಾರದ ದೂರವಾಣಿ ಸಂಭಾಷಣೆ ವೇಳೆ ನೇಪಾಳ ಪ್ರಧಾನಿಗೆ ಮೋದಿ ಆಹ್ವಾನ ನೀಡಿದ್ದು, ಅದನ್ನು ದಹಾಲ್ ಒಪ್ಪಿಕೊಂಡಿದ್ದಾರೆ’ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ನಾಳೆ ನವದೆಹಲಿಗೆ ಆಗಮಿಸಲಿದ್ದು, ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದವರೆಗೂ ಭಾರತದಲ್ಲೇ ಇರಲಿದ್ದಾರೆ. ಜೂನ್ 9ರಂದು ಅವರು ನಿರ್ಗಮಿಸಲಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಎನ್‌ಡೆ ಒಕ್ಕೂಟವು 3ನೇ ಬಾರಿಗೆ ಬಹುಮತ ಪಡೆದು ಅಧಿಕಾರಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಸಿಂಗಪುರದ ಪ್ರಧಾನಿ ವಾಂಗ್ ಸೇರಿ ವಿಶ್ವದ 75 ಗಣ್ಯರು ಶುಭಾಶಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.