ADVERTISEMENT

ಹರಿಯಾಣ | ಸುಸ್ತೂ ಆಗಿಲ್ಲ, ನಿವೃತ್ತಿಯನ್ನೂ ಘೋಷಿಸಿಲ್ಲ: ಕಾಂಗ್ರೆಸ್‌ನ ಹೂಡಾ

ಪಿಟಿಐ
Published 7 ಅಕ್ಟೋಬರ್ 2024, 14:22 IST
Last Updated 7 ಅಕ್ಟೋಬರ್ 2024, 14:22 IST
<div class="paragraphs"><p>ಭೂಪಿಂದರ್ ಸಿಂಗ್ ಹೂಡಾ</p></div>

ಭೂಪಿಂದರ್ ಸಿಂಗ್ ಹೂಡಾ

   

ಪಿಟಿಐ ಚಿತ್ರ

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಯಾರು ಬಹುಮತ ಪಡೆಯಲಿದ್ದಾರೆ ಎಂಬ ಕುತೂಹಲಕ್ಕೆ ಮಂಗಳವಾರ ನಡೆಯಲಿರುವ ಮತ ಎಣಿಕೆಯ ಮೂಲಕ ತೆರೆ ಬೀಳಲಿದೆ. ಈ ಸಂದರ್ಭದಲ್ಲಿ ‘ನನಗೆ ಸುಸ್ತು ಆಗಿಲ್ಲ, ನಿವೃತ್ತಿಯನ್ನೂ ಘೋಷಿಸಿಲ್ಲ’ ಎಂಬ ಹೇಳಿಕೆ ಮೂಲಕ ಕಾಂಗ್ರೆಸ್ ಮುಖಂಡ 77 ವರ್ಷದ ಭೂಪಿಂದರ್ ಸಿಂಗ್ ಹೂಡಾ ಅವರು ತಾನೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘2005ರಿಂದ 2014ರವರೆಗೆ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡಿದ್ದೇನೆ. ಆದರೆ ನಂತರ ಬಂದ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತು. ಈ ಬಾರಿ ಕಾಂಗ್ರೆಸ್‌ಗೆ ಬಹುಮತ ಸಿಗುವ ಸಾಧ್ಯತೆ ಇದೆ. ಜನರ ನಿರ್ಣಯ ಸ್ಪಷ್ಟವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಹತ್ತು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಮತಗಳಿಕೆ ಪ್ರಮಾಣ ಹೆಚ್ಚಳವಾಗಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ 90 ಸ್ಥಾನಗಳಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ’ ಎಂದಿದ್ದಾರೆ.

‘ಫಲಿತಾಂಶ ಪ್ರಕಟವಾದ ನಂತರ ಶಾಸಕರ ಸಭೆ ನಡೆಸಲಾಗುವುದು. ಅವರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ಕಳುಹಿಸಲಾಗುವುದು. ಅಂತಿಮ ನಿರ್ಧಾರ ಅಲ್ಲಿಂದಲೇ ಬರಲಿದೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಣಯಕ್ಕೆ ಎಲ್ಲರ ಒಪ್ಪಿಗೆ ಇದೆ’ ಎಂದು ಹೂಡಾ ಹೇಳಿದ್ದಾರೆ.

ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯ ಮೊದಲ ನಿರ್ಣಯ ಏನಾಗಿರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ನಂತರ, ಮುಖ್ಯಮಂತ್ರಿಗೆ ಈ ಪ್ರಶ್ನೆ ಕೇಳಿ’ ಎಂದಿದ್ದಾರೆ.

ಭೂಪಿಂದರ್‌ ಸಿಂಗ್ ಹೂಡಾ ಅವರೊಂದಿಗೆ ಅವರ ಮಗ ದೀಪಿಂದರ್ ಸಿಂಗ್ ಹೂಡಾ, ಕುಮಾರಿ ಶೆಲ್ಜಾ, ರಣದೀಪ್ ಸುರ್ಜೆವಾಲಾ ಕೂಡಾ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಮಂಗಳವಾರ (ಅ. 8) ಬೆಳಿಗ್ಗೆ ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.