ಕೋಲ್ಕತ್ತ: ಜಪಾನ್‌ನಲ್ಲಿ ಇರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು 2025ರ ಜನವರಿ 23ರೊಳಗೆ ಭಾರತಕ್ಕೆ ತರಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನೇತಾಜಿ ಅವರ ಮರಿಮೊಮ್ಮಗ ಚಂದ್ರಕುಮಾರ್ ಬೋಸ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ನೇತಾಜಿ ಅವರ ಅಸ್ಥಿಯನ್ನು ಟೋಕಿಯೊದ ರೆಂಕೋಜಿ ದೇವಸ್ಥಾನದಲ್ಲಿ ಇನ್ನೂ ಬಿಟ್ಟಿರುವುದು ಮಹಾನ್ ನಾಯಕನಿಗೆ ಮಾಡುವ ಅವಮಾನ ಎಂದು ಅವರು ಹೇಳಿದ್ದಾರೆ.
ರೆಂಕೋಜಿ ದೇವಸ್ಥಾನದಲ್ಲಿ ನೇತಾಜಿ ಅವರ ಅಸ್ಥಿ ಇನ್ನೂ ಇದೆ. ಅವರ ಅಸ್ಥಿಯನ್ನು ವಿದೇಶಿ ನೆಲದಲ್ಲಿ ಇಡುವುದು ಅಪಮಾನದ ಪರಮಾವಧಿ. ಜನವರಿ 23ರೊಳಗೆ ಅಸ್ಥಿಯನ್ನು ಭಾರತಕ್ಕೆ ಮರಳಿ ತರಬೇಕು ಮತ್ತು ಗೌರವಾರ್ಥವಾಗಿ ದೆಹಲಿಯಲ್ಲಿ ಕರ್ತವ್ಯ ಪಥದಲ್ಲಿ ಸ್ಮಾರಕ ನಿರ್ಮಿಸಬೇಕು ಎಂದು ಚಂದ್ರ ಕುಮಾರ್ ಆಗ್ರಹಿಸಿದ್ದಾರೆ.
1945ರ ಆಗಸ್ಟ್ 18ರಂದು ನೇತಾಜಿ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು. ಬೋಸ್ ಅವರ ಸಾವಿಗೆ ಸಂಬಂಧಿಸಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 10 ತನಿಖೆಗಳು ನಡೆದಿವೆ. ಈ ತನಿಖಾ ವರದಿಗಳನ್ನು ಗೋಪ್ಯ ದಾಖಲೆಗಳು ಎಂದು ವರ್ಗೀಕರಿಸಿ ಇಡಲಾಗಿದೆ. ಈ ಎಲ್ಲ ವರದಿಗಳಲ್ಲಿಯೂ ನೇತಾಜಿ ಅವರು ವಿಮಾನ ದುರಂತದಲ್ಲಿ ಮೃತಪಟ್ಟರು ಎಂದೇ ಹೇಳಲಾಗಿದೆ.
‘ಈ ಹತ್ತೂ ತನಿಖೆಗಳ ಈ ವರದಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಆ ಮೂಲಕ ನೇತಾಜಿ ಅವರ ಸಾವಿನ ಕುರಿತು ರೂಪುಗೊಂಡಿರುವ ಹುಸಿ ಸಂಕಥನಗಳು ಅಂತ್ಯವಾಗಬೇಕಿದೆ. ಆದ್ದರಿಂದ ಈ ಬಗ್ಗೆ ಕೇಂದ್ರ ಸರ್ಕಾರವು ಅಂತಿಮ ಹೇಳಿಕೆಯನ್ನು ನೀಡಬೇಕು’ ಎಂದು ಪತ್ರದಲ್ಲಿ ಚಂದ್ರ ಕುಮಾರ್ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.