ಬೆಂಗಳೂರು: ಇಂದು ( ಜನವರಿ23) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, 'ಸುಭಾಷ್ ಚಂದ್ರ ಬೋಸ್ ಅವರು ಸಾಗಿ ಬಂದ ಹಾದಿ ಹಾಗೂ ಅವರ ಧೈರ್ಯವನ್ನು ಸದಾ ಸ್ಮರಿಸುವಂತಹದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಅವರ ಸಮರ್ಪಣಾ ಶಕ್ತಿ, ಸ್ಫೂರ್ತಿ ನೀಡುವಂತಹದ್ದು' ಎಂದು ಹೇಳಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಭಾರತೀಯ ರಾಷ್ಟ್ರೀಯ ಸೇನೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ನೇತಾಜಿ ಅವರು ಬಹುತ್ವ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಸಹಿಷ್ಣುತೆಯ ಭಾರತೀಯ ಮೌಲ್ಯಗಳಿಗೆ ಪ್ರಮುಖ ಉದಾಹರಣೆಯಾಗಿದ್ದರು ಎಂದು ಹೇಳಿದ್ದಾರೆ.
ಕ್ರಾಂತಿಕಾರಿ ಆಲೋಚನೆಗಳ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದ್ದ ಅಪ್ರತಿಮ ದೇಶಪ್ರೇಮಿ, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಇಡೀ ಬದುಕನ್ನೇ ಸವೆಸಿದ ನೇತಾಜಿ ಸುಭಾಷ್ ಚಂದ್ರ ಬೋಸ್‌ರ ದೇಶಪ್ರೇಮ ಮತ್ತು ಸಮರ್ಪಣಾಭಾವವನ್ನು ಅವರ ಜನ್ಮದಿನದಂದು ಸ್ಮರಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ' ಎಂಬ ಸಂದೇಶದ ಮೂಲಕ ಕೋಟಿ ಕೋಟಿ ಭಾರತೀಯರನ್ನು ಒಂದುಗೂಡಿಸಿದ ಮಹಾನ್ ಚೇತನ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಅವರಿಗೆ ನನ್ನ ನಮನಗಳು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ
ಭಾರತ ಕಂಡ ಮಹಾನ್ ಸ್ವಾತಂತ್ರ್ಯ ಸೇನಾನಿ, ಧೈರ್ಯ ಛಲದ ಪ್ರತಿರೂಪವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ಅನಂತ ನಮನಗಳು. ನೇತಾಜಿ ಅವರ ಜೀವನ, ಸಾಧನೆ, ದೇಶಪ್ರೇಮ ಪ್ರತಿಯೊಬ್ಬರಿಗೂ ಪ್ರೇರಣೆ. ಈ ಹಿನ್ನೆಲೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ ಅವರ ಜನ್ಮದಿನವನ್ನು 'ಪರಾಕ್ರಮ ದಿನ' ವನ್ನಾಗಿ ಆಚರಿಸುತ್ತಿದೆ. ನಾವೆಲ್ಲರೂ ನೇತಾಜಿ ಅವರನ್ನು ಸ್ಮರಿಸಿ ಗೌರವಿಸೋಣ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.