ಇಂಫಾಲ: ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯ ಇಟ್ಟಿದ್ದ ಬೇಡಿಕೆ ವಿರುದ್ಧ ನಡೆದ ಒಂದು ರ‍್ಯಾಲಿ ಇಷ್ಟು ದೊಡ್ಡ ಹಿಂಸಾಚಾರಕ್ಕೆ ಕಾರಣವಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಭಾನುವಾರ ಹೇಳಿದ್ದಾರೆ.
ಈಶಾನ್ಯ ರಾಜ್ಯದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದಿಂದ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಸಾರ್ವಜನಿಕರು ಹಾಗೂ ಸರ್ಕಾರದ ಅಪಾರ ಆಸ್ತಿ ನಷ್ಟವಾಗಿದೆ. ಈ ಸಂಬಂಧ ಸಿಎಂ ಪ್ರತಿಕ್ರಿಯಿಸಿದ್ದಾರೆ.
ಮೈತೇಯಿ ಸಮುದಾಯದ ಬೇಡಿಕೆಯನ್ನು ಖಂಡಿಸಿ 'ಅಖಿಲ ಮಣಿಪುರ ಬುಡಕಟ್ಟು ವಿದ್ಯಾರ್ಥಿ ಸಂಘಟನೆ' (ಎಟಿಎಸ್‌ಯುಎಂ) 2023ರ ಮೇ 3 ರಂದು ಪ್ರತಿಭಟನಾ ರ‍್ಯಾಲಿಗೆ ಕರೆ ನೀಡಿತ್ತು. ಇದು ಹಿಂಸಾಚಾರಕ್ಕೆ ಕಾರಣವಾಯಿತು.
ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಂಗ್, 'ಮೈತೇಯಿ ಸಮುದಾಯದ ಎಸ್‌ಟಿ ಸ್ಥಾನಮಾನದ ಬೇಡಿಕೆ ವಿರುದ್ಧ ಎಟಿಎಸ್‌ಯುಎಂ ರ‍್ಯಾಲಿ ನಡೆಸಲು ನಿರ್ಧರಿಸಿತ್ತು. ಆ ಸಂದರ್ಭದಲ್ಲಿ, ಮುಂದೇನಾಗಬಹುದು ಎಂಬ ಬಗ್ಗೆ ಯಾವುದೇ ಸುಳಿವು ಇರಲಿಲ್ಲ' ಎಂದಿದ್ದಾರೆ.
ಸಮಾವೇಶಗಳನ್ನು ನಡೆಸುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇರುತ್ತದೆ ಎಂದಿರುವ ಅವರು, 'ಆದಾಗ್ಯೂ, ಇದು (ರ‍್ಯಾಲಿ) ಹಿಂಸಾಚಾರಕ್ಕೆ ಕಾರಣವಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾತ್ರಿ 9.30ರ ಹೊತ್ತಿಗೆ ರ‍್ಯಾಲಿ ಆರಂಭವಾಗಿತ್ತು. ಒಂದು ಗಂಟೆ ಕಳೆಯುವುದರೊಳಗೆ, ಅಂದರೆ ಸುಮಾರು 10.30ರ ವೇಳೆಗೆ ಚುರಚಾಂದ್‌ಪುರದಲ್ಲಿ ಅರಣ್ಯ ಇಲಾಖೆ ಕಚೇರಿಗೆ ಬೆಂಕಿ ಹಚ್ಚಲಾಯಿತು ಎಂದು ಸಿಂಗ್ ತಿಳಿಸಿದ್ದಾರೆ.
'ಆದಾಗ್ಯೂ, ನಾಗಾ ಬುಡಕಟ್ಟು ಸಮುದಾಯದವರು ಹೆಚ್ಚಾಗಿ ಇರುವ ತಮೆಂಗ್ಲಾಂಗ್, ಉರ್ಕುಲ್ ಮತ್ತು ಸೇನಾಪತಿಯಲ್ಲಿ ಯಾವುದೇ ಹಿಂಸಾಚಾರ ಪ್ರಕರಣಗಳು ವರದಿಯಾಗಿಲ್ಲ. ಮಣಿಪುರವನ್ನು ಒಡೆಯಲು ಪ್ರಯತ್ನಿಸುತ್ತಿರುವವರು ಯಾರು ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕಿದೆ' ಎಂದು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರವು ಜನರನ್ನು ರಕ್ಷಿಸುವ ಸಲುವಾಗಿ, ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿತ್ತು. ಇಡೀ ರಾಷ್ಟ್ರ ಮಣಿಪುರದೊಂದಿಗೆ ನಿಂತಿತು ಎಂದು ಸ್ಮರಿಸಿದ್ದಾರೆ.
'ಎಲ್ಲರೂ ರಾಜ್ಯದ ಜನರೇ. ಅಕ್ರಮವಾಗಿ ರಾಜ್ಯಕ್ಕೆ ಬಂದಿರುವ ವಲಸಿಗರು ಹಳ್ಳಿಗಳನ್ನು ನಿರ್ಮಿಸಿಕೊಳ್ಳಲಿ. ನಾವು ಮೂಲ ಗ್ರಾಮಗಳನ್ನು ವಿರೋಧಿಸುತ್ತಿಲ್ಲ. ಅದೇ ರೀತಿ, ಗಾಂಜಾ ಬೆಳೆಯುವುದೂ ನಿಲ್ಲಬೇಕಿದೆ. ಹಿಂಸಾಚಾರದ ಹೊತ್ತಿನಲ್ಲಿ ಕೇಂದ್ರ ಸರ್ಕಾರ ನೀಡಿದ ನೆರವನ್ನು ಮರೆಯಬಾರದು' ಎಂದು ಕರೆ ನೀಡಿದ್ದಾರೆ.
ಹಿಂಸಾಚಾರ ಆರಂಭವಾದ ಬಳಿಕ ಕನಿಷ್ಠ 219 ಮಂದಿ ಮೃತಪಟ್ಟಿದ್ದಾರೆ.
ಮಣಿಪುರದ ಜನಸಂಖ್ಯೆಯ ಶೇ 53 ರಷ್ಟಿರುವ ಮೈತೇಯಿ ಸಮುದಾಯದವರು ಇಂಫಾಲ ಕಣಿವೆಯಲ್ಲಿ ವಾಸಿಸಿದರೆ, ಶೇ 47ರಷ್ಟಿರುವ ನಾಗಾ ಮತ್ತು ಕುಕಿ ಸಮುದಾಯದವರು ಬೆಟ್ಟ ಪ್ರದೇಶದಲ್ಲಿ ವಾಸಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.