ADVERTISEMENT

ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಾಗ ಬಿರುಕು ಬಿಟ್ಟ ₹1.16 ಕೋಟಿ ವೆಚ್ಚದ ರಸ್ತೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 3:53 IST
Last Updated 5 ಡಿಸೆಂಬರ್ 2021, 3:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಬಿಜನೋರ್‌ ಸದಾರ್‌ನಲ್ಲಿ ಸುಮಾರು ₹1.16 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 7 ಕಿ.ಮೀ. ರಸ್ತೆಯೊಂದರ ಉದ್ಘಾಟನೆ ವೇಳೆ ಸಾಂಪ್ರದಾಯಿಕವಾಗಿ ತೆಂಗಿನಕಾಯಿ ಒಡೆದಾಗ ಅದು ಹೋಳಾಗದೆ ರಸ್ತೆಗೇ ಹಾನಿಯಾದ ಘಟನೆ ನಡೆದಿದೆ.

ಗುರುವಾರ ಸಂಜೆ ಉದ್ಘಾಟನೆಗೆ ಬಂದಿದ್ದ ಬಿಜನೋರ್‌ ಸದಾರ್‌ ಕ್ಷೇತ್ರದ ಬಿಜೆಪಿ ಶಾಸಕಿ ಸುಚಿ ಮೌಸಮ್‌ ಚೌಧರಿ ಅವರು ತೆಂಗಿನಕಾಯಿ ಒಡೆಯುವ ಪ್ರಹಸನದ ಬಳಿಕ ಸ್ಥಳದಲ್ಲೇ ಧರಣಿ ಕುಳಿತಿದ್ದಾರೆ. ಅಧಿಕಾರಿಗಳ ಮೇಲೆ ಹರಿಹಾಯ್ದ ಶಾಸಕಿ ಸುಚಿ ಅವರು ಕಳಪೆ ಕಾಮಗಾರಿ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ತಜ್ಞರ ತಂಡ ಆಗಮಿಸಿ, ರಸ್ತೆಯ ಮಾದರಿಯನ್ನು ತೆಗೆದುಕೊಂಡು ಹೋಗುವ ವರೆಗೆ ಸುಮಾರು 3 ಗಂಟೆಗಳ ಕಾಲ ಶಾಸಕಿ ಸುಚಿ ಚೌಧರಿಅವರು ಸ್ಥಳದಲ್ಲೇ ಧರಣಿ ಕುಳಿತಿದ್ದರು.

ADVERTISEMENT

ರಸ್ತೆಯನ್ನು ಅಗೆದು ಮಾದರಿ ಸಂಗ್ರಹಿಸಲು ಸ್ವತಃ ಶಾಸಕಿ ನೆರವು ನೀಡಿದರು. ಬಳಿಕ ಕಳಪೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕಿ, ಕಾರಣೀಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

'ನೀರಾವರಿ ವಿಭಾಗದಿಂದ ₹1.16 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ. 7 ಕಿ.ಮೀ ಉದ್ದದ ರಸ್ತೆಯನ್ನು ಉದ್ಘಾಟಿಸಲು ನನ್ನನ್ನು ಆಹ್ವಾನಿಸಿದ್ದರು. ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಾಗ ಅದು ಹೋಳಾಗುವ ಬದಲು ರಸ್ತೆಗೇ ಹಾನಿಯಾಗಿದ್ದು ಕಂಡುಬಂತು. ರಸ್ತೆಯ ಮೇಲ್ಭಾಗ ಕಿತ್ತುಬಂತು' ಎಂದು ಶಾಸಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

'ಪರಿಶೀಲಿಸಿದಾಗ ಕಳಪೆ ಕಾಮಗಾರಿ ಎಂದು ತಿಳಿದುಬಂತು. ರಸ್ತೆ ಕೆಲಸ ಸರಿಯಾಗಿ ಪೂರ್ಣಗೊಂಡಿರಲಿಲ್ಲ. ಉದ್ಘಾಟನೆ ಕಾರ್ಯಕ್ರಮವನ್ನು ನಿಲ್ಲಿಸಿದೆವು. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಜೊತೆ ಮಾತನಾಡಿದಾಗ ಮೂವರು ಸದಸ್ಯರುಳ್ಳ ತಂಡವನ್ನು ಪರಿಶೀಲನೆಗೆ ಕಳುಹಿಸಿದರು. ರಸ್ತೆಯ ಮಾದರಿಯನ್ನು ಹೆಚ್ಚಿನ ತನಿಖೆಗೆ ಕಳಿಸಲಾಗಿದೆ. ಸುಮಾರು 3 ಗಂಟೆಗಳ ಕಾಲ ಸ್ಥಳದಲ್ಲೇ ಇದ್ದೆ. ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಚೌಧರಿ ಭರವಸೆ ನೀಡಿದರು.

ಹೆಚ್ಚುವರಿ ಪರಿಶೀಲನೆಗೆ ರಸ್ತೆ ಮಾದರಿಯನ್ನು ಕಳುಹಿಸಲಾಗಿದೆ ಎಂದು ನಿರಾವರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಕಾಸ್‌ ಅಗರ್ವಾಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.