ಪಣಜಿ:ಎರಡು ದಿನಗಳಿಂದ ನಡೆದ ಬಿರುಸಿನ ರಾಜಕೀಯ ಚಟುವಟಿಕೆಗಳ ಬಳಿಕ ಸೋಮವಾರ ತಡರಾತ್ರಿ ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಮೋದ್ ಸಾವಂತ್ ಅವರು ಬುಧವಾರ ವಿಶ್ವಾಸಮತ ಸಾಬೀತುಪಡಿಸುವುದಾಗಿ ಹೇಳಿದ್ದಾರೆ.
12 ಶಾಸಕರನ್ನು ಹೊಂದಿರುವ ಬಿಜೆಪಿ, ತನಗೆ 21 ಸದಸ್ಯರ ಬೆಂಬಲವಿದೆ ಎಂದು ಹೇಳಿಕೊಂಡಿದೆ. ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ), ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಹಾಗೂ ಮೂವರು ಪಕ್ಷೇತರರ ಬೆಂಬಲವಿದ್ದು, ಬಹುಮತ ಸಾಬೀತು ಮಾಡುವುದಾಗಿ ಸಾವಂತ್ ಹೇಳಿದ್ದಾರೆ.
ಒಟ್ಟು 40 ಸದಸ್ಯ ಸ್ಥಾನ ಹೊಂದಿರುವ ಗೋವಾ ವಿಧಾನಸಭೆಯ ಶಾಸಕರ ಸಂಖ್ಯೆ ಸದ್ಯ 36ಕ್ಕೆ ಇಳಿದಿದೆ. ಬಿಜೆಪಿಯ ಮನೋಹರ್ ಪರ್ರೀಕರ್ ಮತ್ತು ಫ್ರಾನ್ಸಿಸ್ ಡಿಸೋಜಾ ಅವರ ನಿಧನ ಮತ್ತು ಕಾಂಗ್ರೆಸ್‌ನ ಸುಭಾಷ್ ಶಿರೋಡ್ಕರ್ ಮತ್ತು ದಯಾನಂದ್ ಸೋಪ್ತೆ ಅವರ ರಾಜೀನಾಮೆಯಿಂದ ನಾಲ್ಕು ಸಂಖ್ಯೆ ಕಡಿಮೆಯಾಗಿದೆ. ಕಾಂಗ್ರೆಸ್‌ನ 14 ಶಾಸಕರು ಮತ್ತು ಎನ್‌ಸಿಪಿಯ ಒಬ್ಬ ಶಾಸಕ ಇದ್ದಾರೆ. ಹೀಗಾಗಿ, ಸರಳ ಬಹುಮತಕ್ಕೆ 19 ಸ್ಥಾನಗಳ ಅಗತ್ಯವಿದೆ.
11 ಸಚಿವರ ಪ್ರಮಾಣವಚನ
ಮನೋಹರ್ ಪರ್ರೀಕರ್ ನಿಧನಾನಂತರ ಸತತ ರಾಜಕೀಯ ವಿದ್ಯಮಾನಗಳಿಗೆ ಗೋವಾ ಸಾಕ್ಷಿಯಾಯಿತು. ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಮಾತ್ರವಲ್ಲದೆ, ಮೈತ್ರಿಪಕ್ಷಗಳೂ ಪಟ್ಟು ಹಿಡಿದವು. ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದ ವಿಶ್ವಜಿತ್ ರಾಣೆ, ಉಪಸ್ಪೀಕರ್ ಮೈಕಲ್ ಲೊಬೊ ಕೂಡ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದರು.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರಸಚಿವ ನಿತಿನ್ ಗಡ್ಕರಿ ಸ್ವಪಕ್ಷೀಯ ಆಕಾಂಕ್ಷಿತರು ಮತ್ತು ಮಿತ್ರಪಕ್ಷಗಳ ಮನವೊಲಿಸುವಲ್ಲಿ ಯಶಸ್ವಿಯಾದರು.
ಮಿತ್ರಪಕ್ಷಗಳಾದ ಜಿಎಫ್‌ಪಿ ಮತ್ತು ಎಂಜಿಪಿಗೆ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸುವ ಮೂಲಕ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತು.
ಸೋಮವಾರ ತಡರಾತ್ರಿ 2 ಗಂಟೆಗೆ ಸಾವಂತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ 36 ಗಂಟೆಗಳ ಕುತೂಹಲಕ್ಕೆ ತೆರೆಬಿದ್ದಿತು. ಅವರೊಂದಿಗೆ ಮಿತ್ರಪಕ್ಷಗಳ ಶಾಸಕರು ಸೇರಿದಂತೆ 11 ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ವಿಶೇಷವೆಂದರೆ, ಮನೋಹರ್ ಪರ್ರೀಕರ್ ಸಂಪುಟದಲ್ಲಿದ್ದ ಎಲ್ಲರೂ ಮತ್ತೆ ಸಚಿವರಾಗಿದ್ದಾರೆ.
ಮುಖ್ಯಮಂತ್ರಿ ಸೇರಿ ಒಟ್ಟು 12 ಸದಸ್ಯರ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಸಚಿವರಿಗೆ ಶೀಘ್ರದಲ್ಲಿ ಖಾತೆ ಹಂಚಲಾಗುವುದು ಎಂದು ಸಾವಂತ್ ತಿಳಿಸಿದ್ದಾರೆ.
ಎಂಜಿಪಿಯ ಸುದಿನ್ ಧವಳೀಕರ್ ಮತ್ತು ಮನೋಹರ್ ಅಜ್‌ಗಾಂವ್ಕರ್, ಜಿಎಫ್‌ಪಿಯ ವಿಜಯ್ ಸರ್ದೇಸಾಯಿ, ವಿನೋದ್ ಪಾಲೇಕಾರ್ ಮತ್ತು ಜಯೇಶ್ ಸಲಗಾಂವ್ಕರ್, ಬಿಜೆಪಿಯ ಮೌವಿನ್ ಗೊಡಿನ್ಹೊ, ವಿಶ್ವಜಿತ್ ರಾಣೆ, ಮಿಲಿಂದ್ ನಾಯ್ಕ್ ಮತ್ತು ನಿಲೇಶ್ ಕ್ಯಾಬ್ರಲ್ ಹಾಗೂ ಪಕ್ಷೇತರ ಶಾಸಕ ರೋಹನ್ ಖಾವುಂತೆ ಮತ್ತು ಗೋವಿಂದ್ ಗಾವಡೆ ಸಂಪುಟಕ್ಕೆ ಸೇರ್ಪಡೆಯಾದರು.
ವಿಜಯ್ ಸರ್ದೇಸಾಯಿ ಮತ್ತು ಸುದಿನ್ ಧವಳೀಕರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪರ್ರೀಕರ್ ಯೋಜನೆ ಮುಂದುವರಿಕೆ
‘ಮನೋಹರ್ ಪರ್ರಿಕರ್ ಅವರ ಉತ್ತಮ ಕಾರ್ಯಗಳನ್ನು ನಮ್ಮ ಸರ್ಕಾರ ಮುಂದುವರಿಸಿಕೊಂಡು ಹೋಗಲಿದೆ’ ಎಂದು ಪ್ರಮೋದ್ ಸಾವಂತ್ ಮಂಗಳವಾರ ಹೇಳಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ, ಪರ್ರೀಕರ್ ಕುಟುಂಬ ಸದಸ್ಯರನ್ನು ಭೇಟಿಯಾಗಿ ಚರ್ಚಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪರ್ರೀಕರ್ ಜನಸಾಮಾನ್ಯರ ನಾಯಕರಾಗಿದ್ದರು. ಮುಖ್ಯಮಂತ್ರಿಯಾಗಿ ಅವರ ಕನಸನ್ನು ಈಡೇರಿಸುವುದು, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ನನ್ನ ಗುರಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.