ನವದೆಹಲಿ: ಕೋವಿಡ್ ಚಿಕಿತ್ಸಾ ಮಾರ್ಗಸೂಚಿಯಿಂದ ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ವೈರಾಣು ನಿರೋಧಕ ಫೆವಿಪಿರವಿರ್‌ಗಳನ್ನು ಕೇಂದ್ರ ಸರ್ಕಾರ ಹೊರಗಿಟ್ಟಿದೆ.
ಈ ಔಷಧಗಳು ಕೋವಿಡ್ ವಿರುದ್ಧ ಪರಿಣಾಮಕಾರಿ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲದೇ ಇರುವುದನ್ನು ತಜ್ಞರು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಮೂರು ಔಷಧಗಳ ಬಳಕೆಯನ್ನು ಕೋವಿಡ್ ಚಿಕಿತ್ಸಾ ಮಾರ್ಗಸೂಚಿಯಿಂದ ತೆಗೆದು ಹಾಕಲಾಗಿದೆ.
ಐವರ್ಮೆಕ್ಟಿನ್, ಫೆವಿಪೆರಾವಿರ್‌ಗಳನ್ನು ಕೋವಿಡ್ ವಿರುದ್ಧದ ಚಿಕಿತ್ಸಕಗಳಾಗಿ ದೇಶದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ 9 ಪುಟಗಳ ಕೋವಿಡ್ ಚಿಕಿತ್ಸಾ ಮಾರ್ಗಸೂಚಿಯಲ್ಲಿ ಈ ಎರಡೂ ಔಷಧಗಳನ್ನು ಉಲ್ಲೇಖಿಸಿಲ್ಲ. ಇದರ ಜೊತೆಗೆ, ಕೋವಿಡ್ ಮೊದಲ ಅಲೆಯಲ್ಲಿ ಭಾರೀ ಬೇಡಿಕೆ ಪಡೆದಿದ್ದ ಹೈಡ್ರೋಕ್ಲೋರಿಕ್ವಿನ್ ಕೂಡ ಮಾರ್ಗಸೂಚಿಯಲ್ಲಿ ಸ್ಥಾನಪಡೆದುಕೊಂಡಿಲ್ಲ.
‘ಕೋವಿಡ್ -19ರ ಚಿಕಿತ್ಸೆಗೆ ಅಜಿಥ್ರೊಮೈಸಿನ್, ಡಾಕ್ಸಿಸೈಕ್ಲಿನ್, ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್, ವಿಟಮಿನ್ ಸಿ, ವಿಟಮಿನ್ ಡಿ, ಜಿಂಕ್, ಅಸೆಟೈಲ್ಸಿಸ್ಟೈನ್ ಮತ್ತು ಬುಡೆಸೊನೈಡ್ ಅಥವಾ ಡೆಕ್ಸಮೆಥಾಸೊನ್‌ಗಳ ಬಳಕೆಗೆ ಭಾರತದಲ್ಲಿ ವ್ಯಾಪಕವಾಗಿ ಶಿಫಾರಸು ಮಾಡಲಾಗುತ್ತಿದೆ. ಶಿಫಾರಸು ಮಾಡದ ಹೊರತಾಗಿಯೂ ಆಂಟಿವೈರಲ್ ಫೆವಿಪಿರವಿರ್ 2021ರ ಏಪ್ರಿಲ್‌ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾಗಿದೆ‘ ಎಂದು ‘ಜಾರ್ಜ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‘ನ ಸಂಶೋಧಕರು ಇತ್ತೀಚೆಗೆ ನಿಯತಕಾಲಿಕೆ ಲ್ಯಾನ್ಸೆಟ್‌ನಲ್ಲಿ ಬರೆದಿದ್ದಾರೆ. ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲೂ ಇದೇ ರೀತಿಯ ಸಂಪಾದಕೀಯ ಬರೆಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.