ನವದೆಹಲಿ: ದೇಹದಲ್ಲಿನ ಪ್ರತಿಕಾಯ ಕೋಶಗಳನ್ನೇ ಬಳಸಿಕೊಂಡು ಅಭಿವೃದ್ಧಿಪಡಿಸಿರುವ ಕೋವಿಡ್ ವಿರುದ್ಧದ ನ್ಯಾನೊ ವ್ಯಾಕ್ಸಿನ್, ಇಲಿಗಳ ಮೇಲೆ ನಡೆಸಿರುವ ಪ್ರಯೋಗದಲ್ಲೂ ಯಶಸ್ವಿಯಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.
ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಶೋಧಕರು ನಡೆಸಿರುವ ಈ ಪ್ರಯೋಗದಿಂದ ಕೋವಿಡ್ ವಿರುದ್ಧ ಹೊಸದಾದ ಮತ್ತು ನೈಸರ್ಗಿಕವಾದ ಅಸ್ತ್ರವೊಂದು ಸಿಕ್ಕಂತಾಗಿದೆ. ‘ಕೋವಿಡ್ ತಡೆಗಟ್ಟಲು ಮುಂದಿನ ಪೀಳಿಗೆಯ ಲಸಿಕೆ ಉತ್ಪಾದನೆಯ ಕಡೆಗೆ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ’ ಎಂದು ಅಧ್ಯಯನ ತಂಡವು ಹೇಳಿದೆ.
ಈ ಸಂಶೋಧನಾ ವರದಿಯು ಎಸಿಎಸ್ ಬಯೋಮೆಟೀರಿಯಲ್ಸ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
‘ಪ್ರಸ್ತುತ ಬಳಕೆಯಲ್ಲಿರುವ ಲಸಿಕೆಗಳಿಗಿಂತ ಇದು ಭಿನ್ನವಾಗಿದೆ. ಇದರಲ್ಲಿ ಆ್ಯಂಟಿಜೆನ್ ಉತ್ಪತ್ತಿಗೆ ಸಂಶ್ಲೇಷಿತ ವಸ್ತುಗಳು ಅಥವಾ ಅಡೆನೊವೈರಸ್ ಅನ್ನು ಬಳಸಲಾಗಿದೆ. ಸ್ವಾಭಾವಿಕವಾದ ನ್ಯಾನೊ ವ್ಯಾಕ್ಸಿನ್ ಪ್ರಸ್ತುತ ಅನುಮೋದಿತ ಲಸಿಕೆಗಳಿಗಿಂತಲೂ ಹಲವು ಅನುಕೂಲಗಳನ್ನು ಹೊಂದಿದೆ. ಕೋವಿಡ್ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನೂ ಹೊಂದಿದೆ. ಸದ್ಯದ ಲಸಿಕೆಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯೂ ಆಗಿದೆ’ ಎಂದು ಅಧ್ಯಯನ ವರದಿ ಹೇಳಿದೆ.
ನ್ಯಾನೊ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಗಳನ್ನು ತಗ್ಗಿಸಲಿದೆ ಎನ್ನುವುದು ಪ್ರಯೋಗದಲ್ಲಿ ದೃಢಪಟ್ಟಿದೆ. ಈ ಲಸಿಕೆಯು ಕೋವಿಡ್‌ನಿಂದ ಆಗುವ ಮುಂದಿನ ಹಂತದ ಸೋಂಕನ್ನು ತಡೆಯುತ್ತದೆ. ಡೆಂಗ್ಯೂನಂತಹ ಇತರ ಸಾಂಕ್ರಾಮಿಕಗಳ ವಿರುದ್ಧವೂ ಪ್ರತಿರಕ್ಷಣೆಯಾಗಿಯೂ ಬಳಸಬಹುದು ಎಂದು ದೆಹಲಿ ಐಐಟಿಯ ಬಯೋಮೆಡಿಕಲ್ ಎಂಜಿನಿಯರಿಂಗ್ ಕೇಂದ್ರದ ಪ್ರಾಧ್ಯಾಪಕರಾದ ಜಯಂತಾ ಭಟ್ಟಾಚಾರ್ಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.