ADVERTISEMENT

ಸಂದೇಶ್‌ಖಾಲಿ ವಿಡಿಯೊ: ಬಿಜೆಪಿ ವಿರುದ್ಧ ಟಿಎಂಸಿ ವಾಗ್ದಾಳಿ

ಪಿಟಿಐ
Published 9 ಮೇ 2024, 15:17 IST
Last Updated 9 ಮೇ 2024, 15:17 IST
<div class="paragraphs"><p>ಟಿಎಂಸಿ </p></div>

ಟಿಎಂಸಿ

   

ಕೋಲ್ಕತ್ತ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ನಡೆದ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಬಿಜೆಪಿಯು ಸುಳ್ಳುಗಳನ್ನು ಹರಡುವ ಕೆಲಸ ಮಾಡುತ್ತಿದೆ ಎಂದು ಟಿಎಂಸಿ ಪಕ್ಷವು ಗುರುವಾರ ಆರೋಪಿಸಿದೆ.

ಸ್ಥಳೀಯ ಬಿಜೆಪಿ ನಾಯಕರೊಬ್ಬರು ಹಲವಾರು ಮಹಿಳೆಯರಿಂದ ಖಾಲಿ ಹಾಳೆಯ ಮೇಲೆ ಸಹಿ ತೆಗೆದುಕೊಂಡಿದ್ದರು; ನಂತರ, ಟಿಎಂಸಿ ಮುಖಂಡರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ದೂರುಗಳನ್ನು ಅದೇ ಹಾಳೆಗಳ ಮೇಲೆ ಬರೆಯಲಾಯಿತು ಎಂದು ಹೇಳುವ ವಿಡಿಯೊಗಳು ಬಹಿರಂಗವಾದ ನಂತರದಲ್ಲಿ ಟಿಎಂಸಿ ಈ ರೀತಿ ಆರೋಪಿಸಿದೆ.

ADVERTISEMENT

ಆದರೆ, ಯಾವುದೇ ವಿಡಿಯೊಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ. ‘ಬಿಜೆಪಿಯು ಸುಳ್ಳುಗಳನ್ನು ಹರಡುತ್ತಿದೆ ಎಂಬುದನ್ನು ಇದು ಮತ್ತೆ ಸಾಬೀತುಪಡಿಸುತ್ತಿದೆ. ನಾವು ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇವೆ. ಸತ್ಯವನ್ನು ತಿರುಚುವ ಹಾಗೂ ಬೆದರಿಕೆ ಒಡ್ಡುವ ಈ ಹೇಯ ಕೃತ್ಯಕ್ಕೆ ಶಿಕ್ಷೆ ಕಾದಿದೆ’ ಎಂದು ಟಿಎಂಸಿ ಪಕ್ಷದ ಹಿರಿಯ ಮುಖಂಡ ಹಾಗೂ ರಾಜ್ಯದ ಸಚಿವ ಶಶಿ ಪಾಂಜಾ ಹೇಳಿದ್ದಾರೆ.

ವಿಡಿಯೊ ಒಂದರಲ್ಲಿ ಮಹಿಳೆಯೊಬ್ಬರು, ‘ಮೋಸ ಮಾಡಿ ನಮ್ಮಿಂದ ಖಾಲಿ ಹಾಳೆಯ ಮೇಲೆ ಸಹಿ ತೆಗೆದುಕೊಳ್ಳಲಾಯಿತು. ನನ್ನ ಹೆಸರಿನಲ್ಲಿ ಅತ್ಯಾಚಾರದ ದೂರುಗಳನ್ನು ದಾಖಲಿಸಲಾಗಿದೆ ಎಂಬುದು ನಂತರ ಗೊತ್ತಾಯಿತು. ಇದು ಬರೀ ಸುಳ್ಳು’ ಎಂದು ಹೇಳಿದ್ದಾರೆ. ಖಾಲಿ ಹಾಳೆಯ ಮೇಲೆ ಸಹಿ ಹಾಕುವಂತೆ ಮಾಡಿದ ಬಿಜೆಪಿಯ ಮಹಿಳಾ ನಾಯಕರೊಬ್ಬರ ಮೇಲೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆ ಮಹಿಳೆ ಒತ್ತಾಯಿಸಿದ್ದಾರೆ.

ಇನ್ನೊಂದು ವಿಡಿಯೊದಲ್ಲಿ, ಸಂದೇಶ್‌ಖಾಲಿಯ ನಿವಾಸಿ ಎನ್ನಲಾದ ಮಹಿಳೆಯೊಬ್ಬರು ಇದೇ ಬಗೆಯ ಮಾತುಗಳನ್ನು ಆಡಿದ್ದಾರೆ. ಬಿಜೆಪಿ ನಾಯಕಿ ಪಿಯಾಲಿ ದಾಸ್ ಅವರು ಬೀಸಿದ ಬಲೆಗೆ ತಾವು ಬಿದ್ದಿರುವುದಾಗಿ ಅವರು ಹೇಳಿದ್ದಾರೆ. ಪಿಯಾಲಿ ಅವರು ‘ನಮ್ಮ ಹೆಸರು ಹಾಳು ಮಾಡಿದ್ದಾರೆ ಮತ್ತು ನಮಗೆ ಬಹಳ ನೋವು ಕೊಟ್ಟಿದ್ದಾರೆ’ ಎಂದು ಇನ್ನೊಬ್ಬರು ಮಹಿಳೆ ದೂರಿದ್ದಾರೆ.

ತಮ್ಮ ವಿಚಾರಗಳನ್ನು ಹೇಳುವ ಸಲುವಾಗಿ ಬಿಜೆಪಿ ಮತ್ತು ಟಿಎಂಸಿ ಮುಖಂಡರು ಜನರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ಆದರೆ ಈಗ ಮತದಾರರು ಎಚ್ಚೆತ್ತಿದ್ದಾರೆ, ಅವರು ಎಡಪಕ್ಷಗಳ ಜೊತೆ ಇದ್ದಾರೆ ಎಂದು ಬಶೀರಹಾಟ್ ಲೋಕಸಭಾ ಕ್ಷೇತ್ರದ ಸಿಪಿಎಂ ಪಕ್ಷದ ಅಭ್ಯರ್ಥಿ ನಿರಾಪದ್ ಸರದಾರ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಇವೆಲ್ಲವೂ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಕೆಲಸ, ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ಬ್ಯಾನರ್ಜಿ ಅವರ ಹೆಸರು ಉಲ್ಲೇಖಿಸದೆ ಹೇಳಿದ್ದಾರೆ. ಈ ವಿಡಿಯೊಗಳ ಹಿಂದೆ ಚುನಾವಣಾ ಕಾರ್ಯತಂತ್ರ ಸಂಸ್ಥೆಯಾದ ಐ–ಪ್ಯಾಕ್ ಕೈವಾಡವೂ ಇದೆ ಎಂದು ಅಧಿಕಾರಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.