ನವದೆಹಲಿ: ‘ನವೀನ ಚಿಂತನಾಕ್ರಮ ಹಾಗೂ ಪ್ರಗತಿಗೆ ಪೂರಕವಾದ ನಿರ್ಧಾರಗಳ ತಳಹದಿ ಮೇಲೆ ವ್ಯವಸ್ಥೆಯೊಂದನ್ನು ರೂಪಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶ ಇರುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.
ದೇಶದ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ,ʼಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ ಸುವರ್ಣ ಭಾರತದತ್ತʼ ಎಂಬ ರಾಷ್ಟ್ರೀಯ ಕಾರ್ಯಕ್ರಮಕ್ಕೆ ವರ್ಚುವಲ್ ವಿಧಾನದ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
‘ಒಬ್ಬ ವ್ಯಕ್ತಿಯ ಅಭಿವೃದ್ಧಿ ಹಾಗೂ ದೇಶದ ಪ್ರಗತಿ ಒಟ್ಟಿಗೇ ಸಾಗುತ್ತವೆ. ಹೀಗಾಗಿ ದೇಶದ ಏಳಿಗೆಗಾಗಿ ಪ್ರತಿಯೊಬ್ಬರು ತಮ್ಮ ಪಾಲಿನ ಕರ್ತವ್ಯ ನಿಭಾವಣೆಗೆ ಒತ್ತು ನೀಡುವುದು ಅಗತ್ಯ’ ಎಂದರು.
‘ಜಾಗತಿಕ ಮಟ್ಟದಲ್ಲಿಯೂ ಸೇರಿ ದೇಶದ ವರ್ಚಸ್ಸಿಗೆ ಧಕ್ಕೆ ತರುವಂತಹ ಪ್ರಯತ್ನಗಳು ನಡೆಯುತ್ತಿವೆ. ಇಂಥ ಪ್ರಯತ್ನಗಳಿಗೆ ವಿರೋಧ ವ್ಯಕ್ತವಾಗಬೇಕು ಹಾಗೂ ದೇಶ ಕುರಿತು ಸಮಂಜಸವಾದ ಚಿತ್ರಣ ನೀಡುವ ಪ್ರಯತ್ನ ನಡೆಯಬೇಕು’ ಎಂದೂ ಪ್ರಧಾನಿ ಹೇಳಿದರು.
ವಿಶ್ವದೆಲ್ಲೆಡೆ ಅನುಯಾಯಿಗಳನ್ನು ಹಾಗೂ ಪ್ರಭಾವ ಹೊಂದಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಂತಹ ಸಂಘಟನೆಗಳು ಜಗತ್ತಿಗೆ ಭಾರತದ ನೈಜ ಚಿತ್ರಣ ನೀಡುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
‘ಅಮೃತ ಮಹೋತ್ಸವದ ಈ ಕಾಲವು ಮಲಗಿ ಕನಸು ಕಾಣುವುದಕ್ಕಾಗಿ ಅಲ್ಲ. ಬದಲಾಗಿ, ನಮ್ಮ ಸಂಕಲ್ಪಗಳನ್ನು ಪೂರೈಸಿಕೊಳ್ಳುವುದಕ್ಕಾಗಿ. ಮುಂದಿನ 25 ವರ್ಷಗಳು ಕಠಿಣ ಪರಿಶ್ರಮ, ತ್ಯಾಗ ಮತ್ತು ಸಂಯಮದಿಂದ ತಪಸ್ಸು ಮಾಡಬೇಕಿದೆ.ನೂರಾರು ವರ್ಷಗಳ ಗುಲಾಮಗಿರಿಯಲ್ಲಿ ನಮ್ಮ ಸಮಾಜವು ಕಳೆದುಕೊಂಡಿರುವುದನ್ನು ಮರಳಿ ಪಡೆಯಲು ಈ ಅವಧಿಯು ಬಹಳ ಮುಖ್ಯʼ ಎಂದರು.
ಸ್ವಾತಂತ್ರ್ಯ ನಂತರದ75 ವರ್ಷಗಳ ಅವಧಿಯಲ್ಲಿ ನಾವು ನಮ್ಮ ಕರ್ತವ್ಯಗಳನ್ನುನಿರ್ಲಕ್ಷಿಸಿದ್ದೇವೆ. ಇದು ದೇಶ ಹಾಗೂ ಜನರ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಒಪ್ಪಿಕೊಳ್ಳಬೇಕು’ ಎಂದರು.
ಚಾಲನೆ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವರ್ಷಪೂರ್ತಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಇದೇ ಸಂದರ್ಭದಲ್ಲಿ ಪ್ರಧಾನಿ ಚಾಲನೆ ನೀಡಿದರು.
30ಕ್ಕೂ ಅಧಿಕ ಪ್ರಚಾರ ಸಭೆಗಳು ಹಾಗೂ 15,000ಕ್ಕೂ ಹೆಚ್ಚು ವಿವಿಧ ಕಾರ್ಯಕ್ರಮಗಳನ್ನು ಈ ಅವಧಿಯಲ್ಲಿ ಆಯೋಜಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.