ರಾಂಚಿ: ಜಾರಿ ನಿರ್ದೇಶನಾಲಯದ (ಇ.ಡಿ) ವಿರುದ್ಧ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜಾರ್ಖಂಡ್ ಹೈಕೊರ್ಟ್ ಫೆಬ್ರುವರಿ 27ರವರೆಗೆ ಮುಂದೂಡಿದೆ.
ಹೇಮಂತ್ ಅವರ ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಅಡ್ವೊಕೇಟ್ ಜನರಲ್ ರಾಜೀವ್ ರಾಜನ್, ‘ಕ್ರೋಡೀಕೃತ ವಿವರಗಳನ್ನು ಒಳಗೊಂಡ ಅಫಿಡವಿಟ್ಟನ್ನು ಸಲ್ಲಿಸಲು ಇ.ಡಿಗೆ ಹೈಕೋರ್ಟ್ ಸೂಚಿಸಿದೆ. ನಮ್ಮ ಅರ್ಜಿಯಲ್ಲಿ ತಿದ್ದುಪಡಿ ತರಲೂ ಅವಕಾಶ ನೀಡಿದೆ. ಇದು ಉತ್ತಮ ಸೂಚನೆ. ಈ ಪ್ರಕರಣದ ಸತ್ಯಾಂಶಗಳನ್ನು ನಾವು ಕೋರ್ಟ್ ಮುಂದೆ ಇಡಲಿದ್ದೇವೆ’ ಎಂದರು.
‘ಹೇಮಂತ್ ಸೊರೇನ್ ವಿರುದ್ಧ ಇ.ಡಿ ಕೈಗೊಂಡಿರುವ ಸಂಪೂರ್ಣ ಪ್ರಕ್ರಿಯೆಯು ದುರುದ್ದೇಶಪೂರಿತವಾಗಿದೆ. ಅಪರಾಧವೇ ನಡೆದಿಲ್ಲವಾದರೂ, ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇ.ಡಿ ತನ್ನ ಅಧಿಕಾರ ಮೀರಿ ವರ್ತಿಸುತ್ತಿದೆ. ಇ.ಡಿಯ ಸಂಪೂರ್ಣ ಪ್ರಕ್ರಿಯೆಯನ್ನು ತಿದ್ದುಪಡಿ ಅರ್ಜಿಯಲ್ಲಿ ಪ್ರಶ್ನಿಸಿದ್ದೇವೆ’ ಎಂದು ರಾಜನ್ ಹೇಳಿದರು.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಕೋರ್ಟ್‌ನಲ್ಲಿ ಹೇಮಂತ್ ಪರ ವಾದ ಮಂಡಿಸಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಇ.ಡಿ ಪರವಾಗಿ ಹಾಜರಿದ್ದರು.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಹೇಮಂತ್ ಸೊರೇನ್ ಅವರನ್ನು ಇ.ಡಿ ಜನವರಿ 31ರಂದು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.