ನವದೆಹಲಿ (ಪಿಟಿಐ): ದೇಶದ ಪ್ರತಿ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಗಳು ಆಯಾ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಂಗಳವಾರ ನಿರ್ದೇಶನ ನೀಡಿದೆ.
ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಕರಿಸಲಾಗುತ್ತದೆಯೇ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಚಾರಣೆ ಸಂದರ್ಭದಲ್ಲಿ ಈ ಆದೇಶ ಹೊರಡಿಸಿತು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಧ್ಯಕ್ಷ, ನ್ಯಾಯಾಧೀಶರಾದ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ಪೀಠವು, ’ಅಪಾಯಕಾರಿ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸಾಮಾನ್ಯ ತ್ಯಾಜ್ಯದೊಂದಿಗೆ ಬೆರೆಸದಂತೆ ಎಚ್ಚರಿಕೆ ವಹಿಸುವುದು ಇಂದಿನ ಅಗತ್ಯ‘ ಎಂದು ಹೇಳಿದರು.
’ತ್ಯಾಜ್ಯ ನಿರ್ವಹಣೆ ಸರಿಯಾಗಿ ಮಾಡಲಾಗುತ್ತಿದೆಯೇ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾಲಕಾಲಕ್ಕೆ ಪರಿಶೀಲಿಸಬೇಕು. ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಪರಿಶೀಲನೆ ನಡೆಸಬೇಕು. ಆ ವರದಿಗಳ ಪ್ರಕಾರ ನಿರ್ದೇಶನಗಳನ್ನು ನೀಡುತ್ತಿರಬೇಕು' ಎಂದು ಪೀಠ ತಿಳಿಸಿದೆ.
’ಜೈವಿಕ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘನೆ ಮಾಡಿದ 130 ಆರೋಗ್ಯ ಘಟಕಗಳು ಹಾಗೂ ಆರು ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕ್ರಮವಾಗಿ ₹7.17 ಕೋಟಿ ಹಾಗೂ ₹85 ಲಕ್ಷ ದಂಡ ವಿಧಿಸಲಾಗಿದೆ‘ ಎಂದು ಮಂಡಳಿ ತಿಳಿಸಿದೆ.
ಕ್ರಮವಾಗಿ 130 ಆರೋಗ್ಯ ಸೌಲಭ್ಯಗಳು ಮತ್ತು ಆರು ಸಾಮಾನ್ಯ ಬಯೋಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳ ವಿರುದ್ಧ ವಿಧಿಸಲಾಗಿರುವ ₹7.17 ಕೋಟಿ ಮತ್ತು ₹85 ಲಕ್ಷ ಪರಿಸರ ಪರಿಹಾರವನ್ನು ಮರುಪಡೆಯಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.