ನವದೆಹಲಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಗಂಗಾ ನದಿಗೆ ಕಲುಷಿತ ನೀರನ್ನು ಹರಿಬಿಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯಲ್ಲಿನ ಅಂಶಗಳನ್ನು ವಾಸ್ತವವನ್ನು ಪರಿಶೀಲಿಸಲು ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್‌ಜಿಟಿ) ಸಮಿತಿಯೊಂದನ್ನು ರಚಿಸಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಮಿತಿಗೆ ಸೂಚಿಸಿದೆ.
ಜನವರಿ 15ರಂದು ಆರಂಭವಾಗಿರುವ ‘ಮಾಘ ಮೇಳ’ವು (ಮಾಘ ಮಾಸದ ಧಾರ್ಮಿಕ ಆಚರಣೆ) ಮಾರ್ಚ್ 8ರ ವರೆಗೆ ನಡೆಯಲಿದೆ. ಇದೇ ವೇಳೆ, ಗಂಗಾ ಮತ್ತು ಯಮುನಾ ಸಂಗಮದ ಬಳಿಯಿರುವ ರಸೂಲಾಬಾದ್‌ನಲ್ಲಿ ಸುಮಾರು 50 ಮೋರಿಗಳಿಂದ ಕೊಳಚೆ ನೀರನ್ನು ಗಂಗೆಗೆ ಹರಿಬಿಡಲಾಗುತ್ತಿದೆ. ಕೊಳಚೆ ನೀರು ಶುದ್ಧೀಕರಣ ಘಟಕಗಳ (ಎಸ್‌ಟಿಪಿ) ಪೈಕಿ ಸುಮಾರು 10 ಘಟಕಗಳು ಸ್ಥಗಿತಗೊಂಡಿವೆ. ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಸುಧೀರ್ ಅಗರ್ವಾಲ್ ಮತ್ತು ಅರುಣ್ ಕುಮಾರ್ ತ್ಯಾಗಿ, ವಿಷಯತಜ್ಞ ಆಫ್ರೋಜ್ ಅಹಮದ್ ಅವರಿದ್ದ ಪೀಠವು, ಈ ನಿಟ್ಟಿನಲ್ಲಿ ತೆಗೆದುಕೊಂಡಿರುವ ಕ್ರಮದ ಕುರಿತು ಎರಡು ತಿಂಗಳ ಒಳಗೆ ವರದಿ ನೀಡುವಂತೆ ಸಮಿತಿಗೆ ನಿರ್ದೇಶಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.