ADVERTISEMENT

ಪಶ್ಚಿಮ ಬಂಗಾಳ ಸರ್ಕಾರಕ್ಕೆ ₹3,500 ಕೋಟಿ ದಂಡ ವಿಧಿಸಿದ ಎನ್‌ಜಿಟಿ

ಪಿಟಿಐ
Published 3 ಸೆಪ್ಟೆಂಬರ್ 2022, 15:32 IST
Last Updated 3 ಸೆಪ್ಟೆಂಬರ್ 2022, 15:32 IST
   

ನವದೆಹಲಿ: ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯ ನಿರ್ವಹಣೆ ಮತ್ತು ಸಂಸ್ಕರಣೆಯಲ್ಲಿ ದೊಡ್ಡ ಅಂತರವಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್‌ಜಿಟಿ) ಪಶ್ಚಿಮ ಬಂಗಾಳ ಸರ್ಕಾರಕ್ಕೆ ₹3,500 ಕೋಟಿ ದಂಡ ವಿಧಿಸಿದೆ.

2022–23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ನಗರಾಭಿವೃದ್ಧಿ ಮತ್ತು ಪುರಸಭೆ ವ್ಯವಹಾರಗಳಿಗಾಗಿ ₹12,818.99 ಕೋಟಿ ಅನುದಾನ ನೀಡಲಾಗಿತ್ತು. ಆದರೂ, ಕೊಳಚೆ ಮತ್ತು ಒಣ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಒದಗಿಸುವ ಯೋಜನೆಗೆ ರಾಜ್ಯ ಸರ್ಕಾರ ಮಹತ್ವ ನೀಡಿಲ್ಲ ಎಂದು ತಿಳಿದುಬಂದಿದೆ ಎಂದು ಎನ್‌ಜಿಟಿ ಹೇಳಿದೆ.

ನಗರ ಪ್ರದೇಶಗಳಲ್ಲಿ ಪ್ರತಿದಿನ 275.8 ಕೋಟಿ ಲೀಟರ್‌ ಕೊಳಚೆ ಉತ್ಪಾದನೆ ಆಗುತ್ತಿದೆ. ಸದ್ಯ ಪ್ರತಿದಿನ 150.5 ಕೋಟಿ ಲೀಟರ್‌ ಕೊಳಚೆ ಸಂಸ್ಕರಣೆ ಮಾಡಲು ವ್ಯವಸ್ಥೆಯಿದೆ. ಆದರೆ 126.8 ಕೋಟಿ ಲೀಟರ್‌ ಕೊಳಚೆಯನ್ನು ಮಾತ್ರ ಪ್ರತಿದಿನ ಸಂಸ್ಕರಿಸಲಾಗುತ್ತಿದೆ. ಸಂಸ್ಕರಣೆ ಆಗದ ಮತ್ತು ಸಂಸ್ಕರಣೆ ಮಾಡಲಾಗುತ್ತಿರುವ ಕೊಳಚೆ ಪ್ರಮಾಣದ ಅಂತರ ಪ್ರತಿದಿನ 149.0 ಕೋಟಿ ಲೀಟರ್‌ ಎಂದು ಎನ್‌ಜಿಟಿ ಹೇಳಿದೆ.

ADVERTISEMENT

ಆರೋಗ್ಯ ಸಮಸ್ಯೆಗಳು ತಲೆದೋರುವುದನ್ನು ಹೆಚ್ಚಿನ ಸಮಯಕ್ಕೆ ಮುಂದೂಡಲು ಸಾಧ್ಯವಿಲ್ಲ. ಮಾಲಿನ್ಯರಹಿತ ಪರಿಸರವನ್ನು ಒದಗಿಸುವುದು ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಸಾಂವಿಧಾನಿಕ ಕರ್ತವ್ಯವಾಗಿದೆ. ಅಲ್ಲದೇ ಇದು ಜೀವಿಸುವ ಹಕ್ಕಿನ ಭಾಗವಾಗದ್ದು, ಜನರ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಹಾಗಾಗಿ, ಸ್ವಚ್ಛ ಪರಿಸರ ಒದಗಿಸುವುದು ಸರ್ಕಾರದ ಹೊಣೆಗಾರಿಕೆ. ಹಣಕಾಸಿನ ಕೊರತೆಯ ನೆಪವನ್ನು ಈ ವಿಚಾರದಲ್ಲಿ ನೀಡಲಾಗುವುದಿಲ್ಲ ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ. ಗೋಯಲ್‌ ಅವರಿದ್ದ ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.