ನವದೆಹಲಿ: ಮಳೆನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಲು ವಿಫಲವಾಗಿರುವ ದೆಹಲಿಯ ಶಿಕ್ಷಣ ಸಂಸ್ಥೆಗಳಿಗೆ ತಲಾ ₹5 ಲಕ್ಷ ದಂಡ ವಿಧಿಸಿ,ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಬುಧವಾರ ಆದೇಶ ಹೊರಡಿಸಿದೆ.
ಶಾಲಾ, ಕಾಲೇಜುಗಳಲ್ಲಿ ಈ ವ್ಯವಸ್ಥೆ ಅಳವಡಿಸದೆ ಇರುವುದಕ್ಕಾಗಿ ದೆಹಲಿ ಸರ್ಕಾರವನ್ನು ಸಹ ಎನ್‌ಜಿಟಿ ತರಾಟೆಗೆ ತೆಗೆದುಕೊಂಡಿದ್ದು, ಎರಡು ವಾರಗಳಲ್ಲಿ ಈ ವ್ಯವಸ್ಥೆಯ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿದೆ.
‘ಎರಡು ತಿಂಗಳ ಒಳಗಾಗಿ ಮಳೆನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಪರಿಸರ ಪರಿಹಾರ ಎಂದು ₹5 ಲಕ್ಷ ಕಟ್ಟಬೇಕಾಗುತ್ತದೆ’ ಎಂದು ಎನ್‌ಜಿಟಿ 2017ರ ನ.16ರಂದು ಆದೇಶ ನೀಡಿತ್ತು.
‘ಈ ಹಿಂದಿನ ಆದೇಶದ ಅನ್ವಯ, ಇಂದಿಗೂ ಸಹ ವ್ಯವಸ್ಥೆ ಜಾರಿಗೆ ತರದೆ ಇರುವ ಶಿಕ್ಷಣ ಸಂಸ್ಥೆಗಳಿಗೆ ದಂಡ ವಿಧಿಸಲಾಗುತ್ತಿದೆ’ ಎಂದು ಎನ್‌ಜಿಟಿ ಹೇಳಿದೆ.
ವ್ಯವಸ್ಥೆ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿರುವ ಶಿಕ್ಷಣ ಇಲಾಖೆಯ ಮೂವರು ಅಧಿಕಾರಿಗಳ ಧೋರಣೆ ಕುರಿತು ಬೇಸರ ವ್ಯಕ್ತಪಡಿಸಿರುವ ನ್ಯಾಯಾಧೀಶ ರಘುವೇಂದ್ರ ಎಸ್.ರಾಠೋಡ್ ನೇತೃತ್ವದ ನ್ಯಾಯಪೀಠ, ಮೂವರಿಗೂ ತಲಾ ₹5 ಸಾವಿರದಂಡ ವಿಧಿಸಿದೆ.
ಆದೇಶ ನೀಡಿದ ದಿನದಿಂದ ಒಂದು ವಾರದೊಳಗೆ ದಂಡ ಪಾವತಿಸಬೇಕು ಎಂದೂ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.