ADVERTISEMENT

ಸಂದೇಶ್‌ಖಾಲಿ ಹಿಂಸಾಚಾರ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್‌

ಸಂದೇಶ್‌ಖಾಲಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 16:30 IST
Last Updated 21 ಫೆಬ್ರುವರಿ 2024, 16:30 IST
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ   

ನವದೆಹಲಿ: ಹಿಂಸಾಚಾರಪೀಡಿತ ಸಂದೇಶ್‌ಖಾಲಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಎಂಬ ವರದಿಯನ್ನು ಆಧರಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮತ್ತು ಡಿಜಿಪಿಗೆ ನೋಟಿಸ್‌ ಜಾರಿ ಮಾಡಿದೆ.

ವಿಷಯದ ಗಂಭೀರತೆಯನ್ನು ಪರಿಗಣಿಸಿ, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ನಿಯೋಗವನ್ನು ಕಳುಹಿಸಲು ಎನ್‌ಎಚ್‌ಆರ್‌ಸಿ ನಿರ್ಧರಿಸಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.

ಎನ್‌ಎಚ್‌ಆರ್‌ಸಿ ಸದಸ್ಯರ ನೇತೃತ್ವದ ನಿಯೋಗದಲ್ಲಿ ಆಯೋಗದ ಅಧಿಕಾರಿಗಳೂ ಇರಲಿದ್ದಾರೆ ಎಂದಿವೆ.

ADVERTISEMENT

ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮಗಳ ವರದಿಗಳನ್ನು ಪರಿಶೀಲಿಸಿ ಆಯೋಗವು ಸ್ವಯಂಪ್ರೇರಿತವಾಗಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿವೆ.

‘ದೌರ್ಜನ್ಯದಲ್ಲಿ ಸಿಪಿಎಂ ಸರ್ಕಾರವನ್ನು ಮೀರಿಸಿದ ಮಮತಾ’: ಪಶ್ಚಿಮ ಬಂಗಾಳದ ಜನರ ಮೇಲೆ ದೌರ್ಜನ್ಯ ಎಸಗುವಲ್ಲಿ ಮಮತಾ ಬ್ಯಾನರ್ಜಿ ಸರ್ಕಾರವು ಹಿಂದಿನ ಸಿಪಿಎಂ ಸರ್ಕಾರವನ್ನು ಮೀರಿಸಿದೆ ಎಂದು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಹೇಳಿದರು.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಜನರು ಆಡಳಿತಾರೂಢ ಟಿಎಂಸಿಗೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಕರೆ ನೀಡಿದರು.

ಸಂದೇಶ್‌ಖಾಲಿಯಲ್ಲಿ ನಡೆದಿರುವ ದೌರ್ಜನ್ಯದ ಕುರಿತು ‘ಇಂಡಿಯಾ’ ಒಕ್ಕೂಟದಲ್ಲಿರುವ ಕಾಂಗ್ರೆಸ್‌ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಯಾಕೆ ಮೌನ ವಹಿಸಿವೆ ಎಂದು ಪ್ರಶ್ನಿಸಿದರು.

ಸಂದೇಶ್‌ಖಾಲಿಯಲ್ಲಿ ನಡೆದಿರುವ ದೌರ್ಜನ್ಯವು ಗಂಭೀರ ಸ್ವರೂಪದ್ದು. ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯವು ಇಡೀ ಸಮಾಜವೇ ತಲೆತಗ್ಗಿಸುವಂತಹದ್ದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.