ADVERTISEMENT

ಜುಲೈ 5ಕ್ಕೆ ಎಂಜಿನಿಯರ್ ರಶೀದ್‌ ಪ್ರಮಾಣವಚನ?

ಜೈಲಿನಲ್ಲಿದ್ದುಕೊಂಡೇ ಲೋಕಸಭೆ ಚುನಾವಣೆಯಲ್ಲಿ ಗೆಲುವು

ಪಿಟಿಐ
Published 1 ಜುಲೈ 2024, 12:35 IST
Last Updated 1 ಜುಲೈ 2024, 12:35 IST
ರಶೀದ್
ರಶೀದ್   

ನವದೆಹಲಿ: ಜೈಲಿನಲ್ಲಿ ಇದ್ದೇ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿರುವ ಕಾಶ್ಮೀರದ ಮುಖಂಡ ಶೇಖ್ ಅಬ್ದುಲ್ ರಶೀದ್ ಇದೇ 5ರಂದು ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಎನ್ಐಎ ಅಧಿಕಾರಿಗಳು ಕಾರಾಗೃಹ ಮತ್ತು ಸಂಸತ್ತಿನ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಎಂಜಿನಿಯರ್ ರಶೀದ್ ಎಂದೇ ಖ್ಯಾತರಾದ ರಶೀದ್ ಅವರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ಕಲ್ಪಿಸುವುದಾಗಿ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೋಮವಾರ ತಿಳಿಸಿದೆ. ಈ ಕುರಿತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಅವರು ಮಂಗಳವಾರ ಆದೇಶ ನೀಡಲಿದ್ದಾರೆ. 

ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಹೋಗುವ ರಶೀದ್ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಬಾರದು. ಪ್ರಮಾಣವಚನದ ಪ್ರಕ್ರಿಯೆ ಒಂದೇ ದಿನ ಪೂರ್ಣಗೊಳ್ಳಬೇಕು ಎಂಬ ಷರತ್ತು ಇರಲಿದೆ ಎಂದು ಎನ್ಐಎ ಪರ ವಕೀಲರು ತಿಳಿಸಿದ್ದಾರೆ.

ADVERTISEMENT

ಎಂಜಿನಿಯರ್ ರಶೀದ್ ಸದ್ಯ ತಿಹಾರ್ ಕಾರಾಗೃಹದಲ್ಲಿದ್ದಾರೆ.  

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ರಶೀದ್ ಅವರನ್ನು 2019ರಲ್ಲಿ ಬಂಧಿಸಲಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮತ್ತು ಸಂಸದೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಧ್ಯಂತರ ಜಾಮೀನು ಅಥವಾ ಪರೋಲ್ ನೀಡಬೇಕು ಎಂದು ಕೋರಿ ರಶೀದ್ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕುರಿತು ತನ್ನ ಪ್ರತಿಕ್ರಿಯೆ ನೀಡುವಂತೆ ಎನ್ಐಎಗೆ ಸೂಚಿಸಿದ್ದ ವಿಶೇಷ ನ್ಯಾಯಾಲಯವು, ವಿಚಾರಣೆಯನ್ನು ಮುಂದೂಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.