ನವದೆಹಲಿ: ಕೇರಳದಲ್ಲಿ 2022ರಲ್ಲಿ ನಡೆದಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ನ ಮುಖಂಡ ಶ್ರೀನಿವಾಸನ್ ಕೊಲೆ ನಂತರ ತಲೆಮರೆಸಿಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸದಸ್ಯನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಶಫೀಖ್ ಬಂಧಿತ ಆರೋಪಿ. ಈತನನ್ನು ಎನ್‌ಐಎ ಅಧಿಕಾರಿಗಳು ಕೊಲ್ಲಂ ಜಿಲ್ಲೆಯಲ್ಲಿ ಸೋಮವಾರ ವಶಕ್ಕೆ ಪಡೆದಿದ್ದರು. ಈತನ ಬಂಧನಕ್ಕೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳೂ ಬಲೆ ಬೀಸಿದ್ದರು. 2022ರ ಏ. 16ರಂದು ಪಾಲಕ್ಕಾಡ್‌ನಲ್ಲಿ ಶ್ರೀನಿವಾಸನ್ ಕೊಲೆಯ ನಂತರ ಈತ ನಾಪತ್ತೆಯಾಗಿದ್ದ.
ಮಲಪ್ಪುರಂ ಜಿಲ್ಲೆಯ ನಿವಾಸಿಯಾದ ಶಫೀಕ್, ಪಿಎಫ್‌ಐ ಸಂಘಟನೆಯ ಭಾಗವಾಗಿದ್ದ. ಕೃತ್ಯಕ್ಕೆ ಸಂಬಂಧಿಸಿದಂತೆ ಪಿಎಫ್‌ಐ ನಾಯಕರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದ ಅಶ್ರಫ್‌ಗೆ ಶಫೀಕ್ ಆಶ್ರಯ ನೀಡಿದ್ದ ಎಂದು ಎನ್‌ಐಎ ಹೇಳಿದೆ.
ಈ ಕೊಲೆ ಸಂಚಿನಲ್ಲಿ ಒಟ್ಟು 71 ಜನರು ಭಾಗಿಯಾಗಿದ್ದಾರೆ ಎಂದು ಎನ್‌ಐಎ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಮಾರ್ಚ್ 17ರಂದು ಹಾಗೂ ನವೆಂಬರ್ 6ರಂದು ಎರಡು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಆರೋಪಿಗಳಲ್ಲಿ ಒಬ್ಬನಾದ ಅಬ್ದುಲ್ ನಾಸೀರ್ ಜ. 2ರಂದು ಮೃತಪಟ್ಟಿದ್ದಾನೆ. ಸಾಹೀರ್ ಕೆ.ವಿ. ಹಾಗೂ ಜಾಫರ್ ಭೀಮಂತ್ವಿಡಾ ಎಂಬಿಬ್ಬರನ್ನು ಕ್ರಮವಾಗಿ 2023ರ ಅ. 19 ಹಾಗೂ ಫೆ. 12ರಂದು ಎನ್‌ಐಎ ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.