ನವದೆಹಲಿ: 2010ರಲ್ಲಿ ಕೇರಳದ ಪ್ರಾಧ್ಯಾಪಕರೊಬ್ಬರ ಕೈ ಕತ್ತರಿಸಿದ ಪ್ರಕರಣದಲ್ಲಿ ಆರೋಪಿಗೆ ಆಶ್ರಯ ನೀಡಿದ್ದಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಕಾರ್ಯಕರ್ತನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶುಕ್ರವಾರ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿ. ಶಫೀರ್ ಎಂಬಾತನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿ ಸವಾದ್‌ಗೆ ಶಫೀರ್ ಆಶ್ರಯ ನೀಡಿದ್ದನು ಎಂದು ಎನ್‌ಐಎ ವಕ್ತಾರ ತಿಳಿಸಿದ್ದಾರೆ.
ಪಿಐಎಫ್‌ನ ಹಲವು ಹಿಂಸಾತ್ಮಕ ಕೃತ್ಯಗಳಲ್ಲಿ ಶಫೀರ್ ಭಾಗಿಯಾಗಿದ್ದ ಎಂದು ತನಿಖಾ ಸಂಸ್ಥೆ ಬಹಿರಂಗಪಡಿಸಿದೆ.
13 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಸವಾದ್‌ನನ್ನು ಪ್ರಸಕ್ತ ಸಾಲಿನ ಜನವರಿಯಲ್ಲಿ ಕಣ್ಣೂರಿನಲ್ಲಿ ಸೆರೆಹಿಡಿಯಲಾಗಿತ್ತು.
2010ರ ಜುಲೈ 4ರಂದು ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳದ ನ್ಯೂಮನ್ ಕಾಲೇಜಿನ ವಾಣಿಜ್ಯ ವಿಷಯ ಪ್ರಾಧ್ಯಾಪಕ ಪ್ರೊ. ಟಿ.ಜೆ. ಜೋಸೆಫ್ ಅವರ ಕೈಯನ್ನು ಕತ್ತರಿಸಲಾಗಿತ್ತು.
ಬಿಕಾಂ ಸೆಮಿಸ್ಟರ್ ಪ್ರಶ್ನೆಪತ್ರಿಕೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಪ್ರಶ್ನೆ ಕೇಳಲಾಗಿದೆ ಎಂಬ ಆರೋಪದ ಮೇಲೆ ಈ ಕೃತ್ಯ ಎಸಗಲಾಗಿತ್ತು.
ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಮತ್ತು ಯುಎ(ಪಿ) ಕಾಯ್ದೆ ಅಡಿಯಲ್ಲಿ ಈವರೆಗೆ 19 ಮಂದಿಗೆ ಶಿಕ್ಷೆ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.